ಕೃಷಿ ಕ್ಷೇತ್ರಕ್ಕೆ ಹೊಸತನದ ಸ್ಪರ್ಶ ರೈತರ ಆಶಯ: ಬಲರಾಮ ಆಚಾರ್ಯ

| Published : Dec 27 2024, 12:47 AM IST

ಕೃಷಿ ಕ್ಷೇತ್ರಕ್ಕೆ ಹೊಸತನದ ಸ್ಪರ್ಶ ರೈತರ ಆಶಯ: ಬಲರಾಮ ಆಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ರಾಧಾಕೃಷ್ಣ ಕಾಂಪ್ಲೆಕ್ಸ್‌ನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ನ ನೂತನ ಪ್ರಧಾನ ಆಡಳಿತ ಕಚೇರಿಯನ್ನು ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಕೃಷಿ ಕ್ಷೇತ್ರದಲ್ಲಿ ಹೊಸ ರೀತಿಯ ಮಾದರಿಯನ್ನು ಅಳವಡಿಸುವುದು ಉತ್ತಮ ಬೆಳವಣಿಗೆಯಾಗಿದ್ದು, ಕೃಷಿ ವಸ್ತುಗಳ ಮೌಲ್ಯವರ್ಧನೆಗೂ ಪೂರಕವಾಗಿದೆ. ಕೃಷಿ ಕ್ಷೇತ್ರಕ್ಕೆ ಹೊಸತನದ ಸ್ಪರ್ಶ ಎಲ್ಲ ರೈತರ ಆಶಯವಾಗಿದೆ ಎಂದು ಉದ್ಯಮಿ ಬಲರಾಮ ಆಚಾರ್ಯ ಅಭಿಪ್ರಾಯಪಟ್ಟರು.ಅವರು ಗುರುವಾರ ಪುತ್ತೂರಿನ ರಾಧಾಕೃಷ್ಣ ಕಾಂಪ್ಲೆಕ್ಸ್‌ನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ನ ನೂತನ ಪ್ರಧಾನ ಆಡಳಿತ ಕಚೇರಿಯನ್ನು ಉದ್ಘಾಟಿಸಿ, ಬಳಿಕ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಶೇ.೪೫ರಷ್ಟು ಉದ್ಯೋಗಿಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಜಿಡಿಪಿಯಲ್ಲಿ ಶೇ.೧೮ ಕೊಡುಗೆ ಕೃಷಿಯಿಂದ ಬರುತ್ತಿದೆ. ಉಳಿದ ಕ್ಷೇತ್ರಗಳಿಗೆ ಹೋಲಿಸಿದಾಗ ಕೃಷಿಕರ ಆದಾಯ ಕಡಿಮೆಯೇ ಆಗಿದೆ. ಕೃಷಿ ಉತ್ಪಾದನೆ ಹೆಚ್ಚುಗೊಳ್ಳುವುದರ ಜೊತೆಗೆ ಕೃಷಿಯಲ್ಲಿ ಹೊಸತನ ಮೂಡಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ರೀತಿಯ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಬೆಳವಣಿಗೆಯಾಗಿದೆ. ಗ್ರಾಮಜನ್ಯ ತಂಡದ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.

ನಿರಖು ಠೇವಣಿ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ಮದ್ಯವರ್ತಿಗಳ ಕೈಗೆ ಸಿಕ್ಕಿ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಗ್ರಾಮಜನ್ಯ ತಂಡದ ಮೂಲಕ ಮದ್ಯವರ್ತಿಗಳನ್ನು ಬದಿಗೆ ಸರಿಸಿ ರೈತರ ಉತ್ಪಾದನೆಗಳನ್ನು ನೇರವಾಗಿ ಮಾರುಕಟ್ಟೆ ಮಾಡುವ ಹೊಸ ವ್ಯವಸ್ಥೆಯಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಮೌಲ್ಯ ಪಡೆಯಲು ಗ್ರಾಮಜನ್ಯ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದರು.

ಹೆಚ್ಚುವರಿ ಶೇರುಗಳನ್ನು ಬಿಡುಗಡೆಗೊಳಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಂ ಭಟ್ ಮಾತನಾಡಿದರು.

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷ ಮೂಲಚಂದ್ರ ಅಧ್ಯಕ್ಷತೆ ವಹಿಸಿ, ಗ್ರಾಮಜನ್ಯ ಸಂಸ್ಥೆಯು ಆರಂಭಗೊಂಡು ನಾಲ್ಕು ವರ್ಷಗಳಾಗಿದ್ದು, ಇದೀಗ ಅಂಬೆಗಾಲಿಡುತ್ತಿದೆ. ಜೇನು, ಹಲಸು ಮತ್ತು ಬಿದಿರು ಮೌಲ್ಯವರ್ಧನೆ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಈ ಸಂದರ್ಭ ಪುತ್ತೂರು ತಾಲೂಕು ಕೃಷಿಕ ಸಮಾಜ ನಿರ್ದೇಶಕ ವಿಜಯಕುಮಾರ್ ರೈ, ಸಂಸ್ಥೆಯ ಷೇರು ಖರೀದಿಯ ಚೆಕ್ಕನ್ನು ಅಧ್ಯಕ್ಷ ಮೂಲಚಂದ್ರ ಕುಕ್ಕಾಡಿ ಅವರಿಗೆ ಹಸ್ತಾಂತರಿಸಿದರು. ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ನ ನಿರ್ದೇಶಕ ರಾಮಪ್ರತೀಕ್ ಕರಿಯಾಲ, ನಿರಂಜನ್ ಪೊಳ್ಯ, ಶ್ರೀಹರ್ಷ ಎಕ್ಕಡ್ಕ, ಶ್ರೀನಂದನ್ ಕುಂಞ್ಞಹಿತ್ಲು, ಸಲಹಾ ಮಂಡಳಿಯ ಸದಸ್ಯ ಸತ್ಯನಾರಾಯಣ ಕೆ. ಮತ್ತಿತರರು ಉಪಸ್ಥಿತರಿದ್ದರು.ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಸಾತ್ವಿಕ್ ಶಂಕರ್ ಸ್ವಾಗತಿಸಿದರು. ರವೀಶ್ ಎ. ವಂದಿಸಿದರು.