ಸಾರಾಂಶ
ಬಿಂದುಮಾಧವ ಮಣ್ಣೂರ
ಕನ್ನಡಪ್ರಭ ವಾರ್ತೆ ಅಫಜಲ್ಪುರತಾಲೂಕಿನ ಮುಂಗಾರು ಹಂಗಾಮಿನ ಮುಖ್ಯ ವಾಣಿಜ್ಯ ಬೆಳೆಗ ಹೆಸರು ಉದ್ದು ಬೆಳೆ ನಿರೀಕ್ಷಿತ ಪ್ರಮಾಣದ ಇಳುವರಿ ಬಾರದಿರುವುದು ರೈತರನ್ನು ಚಿಂತೆಗೆ ದೂಡಿದೆ. ರೈತರು ಮುಂಗಾರು ಹಂಗಾಮಿನಲ್ಲಿ ಅಲ್ಪಾವಧಿಯಲ್ಲಿ ಬೆಳೆಯುವ ಹೆಸರು ಉದ್ದು ಬೆಳೆಗೆ ಇಳುವರಿ ಕಡಿಮೆಯಾಗಿದೆ ಜೊತೆಗೆ ಧಾರಣೆ ಕುಸಿತ ಕಂಡಿದೆ
ತಾಲೂಕಿನಾದ್ಯಂತ ಹೊಲಗಳಲ್ಲಿ ಹೆಸರು ಉದ್ದು ರಾಶಿ ಮಾಡುವುದು ಈಗ ಅಲ್ಲಲ್ಲಿ ಶುರುವಾಗಿದೆ. ಮುಂಗಾರು ಹಂಗಾಮಿನ ಮಳೆ ಮೊದಲು ಉತ್ತಮವಾಗಿ ಸುರಿಯಿತು. ಇದರಿಂದ ಹರ್ಷಿತರಾದ ಅನ್ನದಾತರು ಭಾರಿ ನಿರೀಕ್ಷೆಯಿಂದ ಹೆಸರು ಉದ್ದು ಬಿತ್ತನೆ ಮಾಡಿದ್ದರು. ಆದರೆ, ಮಧ್ಯದಲ್ಲಿ ಮಳೆ ಅಭಾವದಿಂದ ಬೆಳೆಗೆ ತೇವಾಂಶದ ಕೊರತೆ ಎದುರಾಯಿತು. ಬಳಿಕ ಮಳೆ ಹೆಚ್ಚು ಸುರಿದ ಪರಿಣಾಮ ಬೆಳೆಗಳಿಗೆ ಹಳದಿ ರೋಗ, ಬೂದುರೋಗ,ಶೀರ ರೋಗದಿಂದ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ.ತಾಲೂಕಿನ ಮಣ್ಣೂರ, ಹೊಸೂರ, ಶೇಷಗಿರಿ, ಶಿವಬಾಳನಗರ, ದೇವಪ್ಪನಗರ, ಉಪ್ಪಾರವಾಡಿ, ರಾಮನಗರ, ಕುಡಗನೂರ ಶಿವೂರ, ಕರಜಗಿ, ಮಾಶಾಳ, ದಿಕ್ಸಂಗಾ, ನಂದರ್ಗಾ, ತೆಲ್ಲೂಣಗಿ, ಉಡಚಣ, ಉಡಚಣಹಟ್ಟಿ, ಭೊಸಗಾ, ದುದ್ದುಣಗಿ ಮಂಗಳೂರ, ಹಿರಿಯಾಳ, ಭಂಕಲಗಾ, ಶಿರವಾಳ, ಅಳ್ಳಗಿ ಬಿ ಗೌರ, ಅಫಜಲ್ಪುರ ಪಟ್ಟಣ, ಶಿವಪುರ, ಬನ್ನಟ್ಟಿ, ಕೇಶಾಪೂರ ಹವಳಗಾ, ಘತ್ತರಗಾ, ಹಿಂಚಗೇರಾ, ಬಟಗೇರಾ, ಮಾತೋಳಿ, ಮಲ್ಲಾಬಾದ, ಅತನೂರ, ಚೌಡಾಪುರ, ಬಂದರವಾಡ ಹಸರಗುಂಡಗಿ, ಭೈರಾಮಡಗಿ, ಸ್ಟೇಷನ್ ಗಾಣಗಾಪುರ, ದೇವಲ ಗಾಣಗಾಪುರ, ಗೊಬ್ಬೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಹೆಸರು ಉದ್ದು ಬೆಳೆದ ರೈತರನ್ನು ಚಿಂತೆಗೀಡು ಮಾಡಿದೆ.ಪ್ರಸಕ್ತ ಸಾಲಿನಲ್ಲಿ ಹೆಸರು, ಉದ್ದು ಬಿತ್ತನೆ ಮಾಡಿದ್ದ ರೈತನಿಗೆ ಕಡಿಮೆ ಅವಧಿ ಅಂದರೆ ಕೇವಲ 45 ದಿನಗಳಲ್ಲಿ ಬರುವ ಫಸಲು ಇದು. ಹೆಸರು, ಉದ್ದು, ಬಂದರೆ ಮುಂಗಾರಿನ ಇತರ ಬೆಳೆಗಳ ಕಳೆ, ಗೊಬ್ಬರ, ಬೀಜ, ಬಿತ್ತನೆ ಖರ್ಚಿನ ಜತೆಗೆ ಜೀವನ ನಿರ್ವಹಣೆಗೂ ಆಸರೆಯಾಗುವುದು ಎಂಬ ಲೆಕ್ಕಾಚಾರ ರೈತರಲ್ಲಿತ್ತು. ಹೆಚ್ಚಿನ ಪ್ರಮಾಣದಲ್ಲಿ ಹೆಸರು ಉದ್ದು ಬಿತ್ತನೆ ಮಾಡಿದ್ದರು. ಆದರೆ, ಅದೂ ನಿರೀಕ್ಷಿತ ಪ್ರಮಾಣದಲ್ಲಿ ರೈತನ ಕೈಹಿಡಿಯಲಿಲ್ಲ. ನಾನಾ ರೋಗ, ರುಜಿನಗಳಿಗೆ ತುತ್ತಾಯಿತು.
ಖರ್ಚು ಅಧಿಕ:ಒಂದು ಎಕರೆಗೆ 2 ರಿಂದ 3 ಕ್ವಿಂಟಾಲ್ ಗಿಂತ ಕಡಿಮೆ ಇಳುವರಿ ಬಂದಿದೆ. ರೈತರು ರಾಶಿ ಮಾಡುವ ಮೊದಲು ಹೆಸರು ಧಾರಣೆ 10000 ರುಪಾಯಿ ಹಾಗೂ 11000 ರುಪಾಯಿ ಇದ್ದು, ಉದ್ದು ಧಾರಣೆ ಈಗ ಏಕಾಏಕಿ 5000 ರಿಂದ 6000 ರುಪಾಯಿಗೆ ಧಾರಣೆ ಇಳಿದಿದೆ. ರೈತರು ಸಾಲ ಮಾಡಿ ಬಿತ್ತನೆ ಬೀಜ, ಬಾಡಿಗೆ ಗಳೆ, ರಾಸಾಯನಿಕ ಗೊಬ್ಬರ, ಆಳಿನ ಕೂಲಿ ಸೇರಿ ಅಪಾರ ಹಣ ವೆಚ್ಚ ಮಾಡಿದ್ದಾರೆ.
ಆದರೆ, ಪ್ರಸ್ತುತ ಲಭಿಸಿರುವ ಬೆಳೆ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಹೆಸರು, ಉದ್ದು, ಬಾಡಿಗೆ ಗಳೆ, ಬಿಡಿಸಿದ ಖರ್ಚು ವೆಚ್ಚ ಜೊತೆಗೆ ಹೆಸರು ಇಳುವರಿ ಲೆಕ್ಕ ಹಾಕಿದರೆ ಆದಾಯಕ್ಕಿಂತ ಖರ್ಚು ಅಧಿಕವಾಗುತ್ತಿದೆ. ಅನ್ನದಾತನ ಕಣ್ಣಂಚಿನಲ್ಲಿ ಕಣ್ಣೀರು ಜಿನುಗುತ್ತಿದೆ ಎಂದು ರೈತರಾದ ಅಣ್ಣಪ್ಪ ಬಿಜಾಪುರ ಭೀಮಣ್ಣ ಹಡಲಗಿ ಮಲ್ಲಪ್ಪ ಬಿಜಾಪುರ ಬಾನುದಾಸ ಶಾಂತಪ್ಪ ಬಿಜಾಪುರ ತಮ್ಮ ಅಳಲು ತೋಡಿಕೊಂಡರು.