ಸುಂಟಿಕೊಪ್ಪ: ಆಶಾದಾಯಕ ಮಳೆಗೆ ಕೃಷಿ ಚಟುವಟಿಕೆ ಬಿರುಸು

| Published : Jul 23 2024, 12:32 AM IST

ಸಾರಾಂಶ

ಆಶಾದಾಯಕ ಮುಂಗಾರು ಮಳೆಗೆ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಮಳೆ ಗದ್ದೆ ಉಳುಮೆ ಕಾರ್ಯಕ್ಕೆ ಮುನ್ನಡಿ ಇಡಲು ಸಹಕಾರಿಯಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಪ್ರಸಕ್ತ ಸಾಲಿನ ಆಶಾದಾಯಕ ಮುಂಗಾರು ಮಳೆಯಿಂದ ಕೃಷಿಕರು ಹೆಚ್ಚಿನ ಉತ್ಸಾಹದೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮೇ ತಿಂಗಳಿನಲ್ಲಿ ಆರಂಭಿಕ ಉತ್ತಮವಾಗಿ ಮಳೆ ಲಭಿಸಿದ್ದರಿಂದ ರೈತರಿಗೆ ಗದ್ದೆ ಉಳುಮೆ ಕಾರ್ಯಕ್ಕೆ ಮುನ್ನುಡಿ ಇಡಲು ಸಹಕಾರಿಯಾಯಿತು. ಜೂನ್‌ನಲ್ಲಿ ಬಹುಪಾಲು ಮಳೆಯಾಗುವುದರೊಂದಿಗೆ ಜುಲೈನಲ್ಲಿ ಪುನರ್ವಸು ಮಳೆಯ ಆರ್ಭಟ ಉತ್ತಮವಾಗಿತ್ತು. ಹೊಳೆ, ತೋಡು, ನಾಲೆಗಳು ತುಂಬಿ ಹರಿದಿದ್ದು ಗದ್ದೆಗಳಲ್ಲೂ ನೀರು ತುಂಬಿ ರೈತರು ಗದ್ದೆ ಉಳುಮೆ ಮಾಡಿ ಬತ್ತದ ಬೀಜ ಹಾಕಲು ಸಹಕಾರಿಯಾಯಿತು. ಮೊದಲೇ ಬೀಜ ಹಾಕಿದ ರೈತರಿಗೆ ಸಸಿಮಡಿ ಬೆಳೆದಿದ್ದರಿಂದ ಈಗ ಗದ್ದೆಯನ್ನು ಹದಮಾಡಿ ನಾಟಿ ಕಾಯಕ ಮಾಡಲು ಅನುಕೂಲಕರವಾಗಿದೆ.

ಸುಂಟಿಕೊಪ್ಪದ ಗದ್ದೆಹಳ್ಳ ನಿವಾಸಿ ಪ್ರಗತಿಪರ ಕೃಷಿಕರಾದ ಪಟ್ಟೆಮನೆ ಉದಯಕುಮಾರ್, ಪ್ರಸನ್ನ, ಮಧು, ಸದಾಶಿವ ಅವರು 2.1/2 ಎಕ್ರೆ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂತು. ಕೊಡಗರಹಳ್ಳಿ, ಕಂಬಿಬಾಣೆ, ಹೆರೂರು, ಹರದೂರು, ಹಾರ್‌ಬೈಲ್, ಕೆದಕಲ್, ಹೊರೂರು, ಹಾಲೇರಿ, ಕಾಂಡನಕೊಲ್ಲಿ ಮೊದಲಾದ ಗ್ರಾಮದಲ್ಲೂ ಬಿರುಸಿನಿಂದ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.