ಮಳೆ ಬಿಡುವು: ಅರಲಗೂಡಲ್ಲಿ ಕೃಷಿ ಚಟುವಟಿಕೆ ಚುರುಕು

| Published : May 25 2024, 12:51 AM IST

ಸಾರಾಂಶ

ಅರಕಲಗೂಡು ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದು ಕೃಷಿ ಚಟುವಟಿಕೆ ನಿಧಾನಗತಿಯಲ್ಲಿ ಗರಿಗೆದರುತ್ತಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕಿನ ನಾಟಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕಳೆದ ಬಾರಿ ತಂಬಾಕಿಗೆ ಉತ್ತಮ ಬೆಲೆ ದೊರೆತಿರುವ ಹಿನ್ನೆಲೆಯಲ್ಲಿ ಈ ಬಾರಿ ತಂಬಾಕು ಬೆಳೆ ಪ್ರದೇಶ ಹೆಚ್ಚಾಗುವ ಸಾಧ್ಯತೆ ಇದೆ.

ಬಹುತೇಕ ಪೂರ್ಣಗೊಂಡ ತಂಬಾಕು ಬೆಳೆಯ ನಾಟಿ । 600-700 ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ । ಹಲವು ಬೆಳೆಗಳ ಬಿತ್ತನೆ ಸಿದ್ಧತೆ

ಶೇಖರ್ ಯಲಗತವಳ್ಳಿ

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದು ಕೃಷಿ ಚಟುವಟಿಕೆ ನಿಧಾನಗತಿಯಲ್ಲಿ ಗರಿಗೆದರುತ್ತಿದೆ.

ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕಿನ ನಾಟಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕಳೆದ ಬಾರಿ ತಂಬಾಕಿಗೆ ಉತ್ತಮ ಬೆಲೆ ದೊರೆತಿರುವ ಹಿನ್ನೆಲೆಯಲ್ಲಿ ಈ ಬಾರಿ ತಂಬಾಕು ಬೆಳೆ ಪ್ರದೇಶ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೊಂದು ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಕೃಷಿಗೆ ಪೂರಕವಾದ ವಾತಾವರಣ ಇದ್ದರೂ ರೈತರು ಆಲೂಗಡ್ಡೆ ಕೃಷಿಗೆ ಹೆಚ್ಚಿನ ಉತ್ಸಾಹ ತೋರುತ್ತಿಲ್ಲ, ಕಳೆದ ಕೆಲವು ವರ್ಷಗಳಿಂದ ರೋಗದ ಹಾವಳಿಯಿಂದ ನಷ್ಟಕ್ಕೊಳಗಾಗಿರುವುದು ರೈತರಲ್ಲಿ ಆಲೂಗಡ್ಡೆ ಕೃಷಿ ನಿರುತ್ಸಾಹಕ್ಕೆ ಕಾರಣವಾಗಿದೆ. ಈ ಬಾರಿ 600 ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ನೀರಿಕ್ಷೆ ಇದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಡಿ. ರಾಜೇಶ್ ತಿಳಿಸಿದರು.

ಕಳೆದ ಬಾರಿ ಶುಂಠಿಗೆ ಉತ್ತಮ ಬೆಲೆ ದೊರೆತಿರುವ ಹಿನ್ನೆಲೆಯಲ್ಲಿ ಈ ಬಾರಿ 1300 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿದ್ದು ಪ್ರಸ್ತುತ ಬಿದ್ದಿರುವ ಮಳೆ ನೀರಿನ ಕೊರತೆ ನೀಗಿಸಿದ್ದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಹೆಚ್ಚಿನ ರೈತರು ಕೈಹಿಡಿದಿರುವ ಮುಸುಕಿನ ಜೋಳ ಈ ಬಾರಿಯೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಉಳಿದಂತೆ ಅಲಸಂದೆ, ಹೆಸರು ಮುಂತಾದ ಬೆಳೆಗಳ ಬಿತ್ತನೆಗೆ ಭೂಮಿ ಸಿದ್ಧತೆ ನಡೆದಿದ್ದು ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ.

ವಾಡಿಕೆಗಿಂತ ಹೆಚ್ಚಾದ ಮಳೆ:

ತಾಲೂಕಲ್ಲಿ ಮೇ 21 ರವರೆಗೆ ವಾಡಿಕೆ ಮಳೆ ಪ್ರಮಾಣ 6.78 ಸೆಂ.ಮೀ. ಆದರೆ ಈ ಬಾರಿ 18.96 ಸೆಂ.ಮೀ. ಮಳೆ ಸುರಿದಿದ್ದು ಶೇ 180 ರಷ್ಟು ಹೆಚ್ಚಿನ ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆ ಪ್ರಮಾಣ 6.78 ಸೆಂ.ಮೀ ಇದ್ದು ಪ್ರಸ್ತುತ 18.96 ಸೆಂ.ಮೀ. ಮಳೆಯಾಗಿ ಶೇ 180 ರಷ್ಟು ಹೆಚ್ಚಿದೆ. ದೊಡ್ಡಮಗ್ಗೆ ಹೋಬಳಿ ವಾಡಿಕೆ ಮಳೆ 6.61 ಸೆಂ.ಮೀ. ಇದ್ದು 14.98 ಸೆಂ.ಮೀ. ಮಳೆಯಾಗಿ ಶೇ 127 ರಷ್ಟು ಹಚ್ಚಿನ ಮಳೆ ಬಿದ್ದಿದೆ. ಮಲ್ಲಿಪಟ್ಟಣ ಹೋಬಳಿಯಲ್ಲಿ 5.44 ಸೆಂ.ಮೀ. ವಾಡಿಕೆ ಮಳೆ ಇದ್ದು ಶೇ 21.92 ರಷ್ಟು ಮಳೆ ಬಿದ್ದು ಶೇ 303 ರಷ್ಟು ಹೆಚ್ಚಿನ ಮಳೆಯಾಗಿದೆ. ಕೊಣನೂರು ಹೋಬಳಿಯಲ್ಲಿ ವಾಡಿಕೆ ಮಳೆ ಪ್ರಮಾಣ 6.3 ಸೆಂ.ಮೀ, ಬಿದ್ದಿರುವ ಮಳೆ 18.01 ಸೆಂ.ಮೀ. ಶೇ 186 ರಷ್ಟು ಮಳೆ ಹೆಚ್ಚಾಗಿದೆ. ರಾಮನಾಥಪುರ ಹೋಬಳಿಯಲ್ಲಿ ವಾಡಿಕೆ ಮಳೆ 6.64 ಸೆಂ.ಮೀ., 18.46 ಸೆಂ.ಮೀ. ಮಳೆಯಾಗಿ ಶೇ 178 ರಷ್ಟು ಹೆಚ್ಚಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ.ಕವಿತಾ ತಿಳಿಸಿದ್ದಾರೆ.

ರೈತರು ಬಿತ್ತನೆ ಆಲೂಗಡ್ಡೆಯನ್ನು ಖರೀದಿ ಮಾಡಿ ಕಡ್ಡಾಯವಾಗಿ ಕನಿಷ್ಠ ಒಂದು ವಾರ ಅಥವಾ ಅಧಿಕ ಸಮಯ ನೆರಳಿನಲ್ಲಿ ಆರಿ ಹಾಕಬೇಕು. ಮೊಳಕೆ ಕಣ್ಣುಗಳು ಬಂದ ನಂತರವಷ್ಟೇ ಆಲೂಗಡ್ಡೆಯನ್ನು ಕೊಯ್ದು ಸೂಕ್ತ ಶಿಲೀಂದ್ರ ನಾಶಕಗಳಿಂದ ಬಿಜೋಪಚಾರ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳಬೇಕು.

ಡಿ. ರಾಜೇಶ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ.ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದು ತೇವಾಂಶ ಹೆಚ್ಚಾಗಿರುವುದು ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಮುಂಗಾರು ಪ್ರಾರಂಭವಾಗುವ ಮುನ್ನ ಕೆಲಕಾಲ ಮಳೆ ಬಿಡುವು ನೀಡುವುದು ಅಗತ್ಯ.

ಯೋಗಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ.