ಹವಾಮಾನ ವೈಪರೀತ್ಯ ಹಾಗೂ ಕೀಟ ರೋಗಗಳ ಬಾಧೆಯಿಂದ ಬೆಳೆ ಹಾನಿಯಾದಲ್ಲಿ ಗ್ರಾಮ ಪಂಚಾಯಿತಿ ಅಥವಾ ಹೋಬಳಿ ಮಟ್ಟದಲ್ಲಿ ಕೈಗೊಳ್ಳುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಕೊರತೆಯನ್ನು ನಿರ್ಧರಿಸಿ, ಅರ್ಹ ರೈತರಿಗೆ ವಿಮೆ ಪರಿಹಾರ ವಿತರಿಸಲಾಗುತ್ತದೆ.
ಗದಗ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ಅಕಾಲಿಕ ಮಳೆ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಿ, ಅವರ ಆರ್ಥಿಕ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜರುಗಿದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹವಾಮಾನ ವೈಪರೀತ್ಯ ಹಾಗೂ ಕೀಟ ರೋಗಗಳ ಬಾಧೆಯಿಂದ ಬೆಳೆ ಹಾನಿಯಾದಲ್ಲಿ ಗ್ರಾಮ ಪಂಚಾಯಿತಿ ಅಥವಾ ಹೋಬಳಿ ಮಟ್ಟದಲ್ಲಿ ಕೈಗೊಳ್ಳುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಕೊರತೆಯನ್ನು ನಿರ್ಧರಿಸಿ, ಅರ್ಹ ರೈತರಿಗೆ ವಿಮೆ ಪರಿಹಾರ ವಿತರಿಸಲಾಗುತ್ತದೆ.ಅದೇ ರೀತಿ ಪ್ರವಾಹ, ಆಲಿಕಲ್ಲು ಮಳೆ ಹಾಗೂ ಭೂಕುಸಿತದಂತಹ ಸ್ಥಳ ನಿರ್ದಿಷ್ಟ ವಿಕೋಪಗಳಿಂದ ಹಾನಿಯಾದ ಸಂದರ್ಭದಲ್ಲಿ ವೈಯಕ್ತಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವ ವ್ಯವಸ್ಥೆಯೂ ಈ ಯೋಜನೆಯಲ್ಲಿದೆ ಎಂದ ಅವರು, 2026-27ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ ಇಂಡಸ್ಇಂಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, 2026-27ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಅಂತಿಮ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಜೋಳ (ನೀರಾವರಿ ಮತ್ತು ಮಳೆಯಾಶ್ರಿತ), ಹುರುಳಿ (ಮಳೆಯಾಶ್ರಿತ), ಸೂರ್ಯಕಾಂತಿ (ಮಳೆಯಾಶ್ರಿತ) ಹಾಗೂ ಕುಸುಬೆ (ಮಳೆಯಾಶ್ರಿತ) ಬೆಳೆಗಳಿಗೆ ನವೆಂಬರ್ 16 ಕೊನೆಯ ದಿನವಾಗಿದೆ. ಮುಸುಕಿನ ಜೋಳ (ನೀರಾವರಿ), ಕಡಲೆ (ಮಳೆಯಾಶ್ರಿತ) ಹಾಗೂ ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ನವೆಂಬರ್ 30 ಕೊನೆಯ ದಿನವಾಗಿದ್ದು, ಗೋಧಿ (ನೀರಾವರಿ ಮತ್ತು ಮಳೆಯಾಶ್ರಿತ) ಹಾಗೂ ಕಡಲೆ (ನೀರಾವರಿ) ಬೆಳೆಗಳಿಗೆ ಡಿಸೆಂಬರ್ 15 ಅಂತಿಮ ದಿನಾಂಕವಾಗಿದೆ. ಅದೇ ರೀತಿ ಬೇಸಿಗೆ ಹಂಗಾಮಿನಲ್ಲಿ ಭತ್ತ (ನೀರಾವರಿ) ಬೆಳೆಗೆ ಫೆಬ್ರವರಿ 26, 2027 ಹಾಗೂ ಶೇಂಗಾ (ನೀರಾವರಿ) ಬೆಳೆಗೆ ಮಾರ್ಚ್ 13, 2027 ಕೊನೆಯ ದಿನಾಂಕವಾಗಿದೆ.ರೈತರು ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳೊಂದಿಗೆ ಮುಂಚಿತವಾಗಿಯೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.