ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿ ಜ.17ರಂದು ಫ್ಯಾಶನ್ ಫ್ರುಟ್ ಮತ್ತು ಪಪ್ಪಾಯ ಹಣ್ಣಿನ ವೈವಿಧ್ಯತೆಯ ಪ್ರದರ್ಶನ ಮತ್ತು ಚರ್ಚೆ ನಡೆಯಲಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ. ಎಸ್.ರಾಜೇಂದ್ರ, ಫ್ಯಾಶನ್ ಫ್ರುಟ್ ಮತ್ತು ಪಪ್ಪಾಯ ಹಣ್ಣಿನಲ್ಲಿರುವ ವೈವಿಧ್ಯತೆಯನ್ನು ದಾಖಲು ಮಾಡುವ ಉದ್ದೇಶದಿಂದ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿ ಪ್ರದರ್ಶನ ಮತ್ತು ಚರ್ಚೆಯನ್ನು ಹಮ್ಮಿಕೊಳ್ಳಲಾಗಿದ್ದು, ಬೆಳೆಗಾರರು ಬೀಜದಿಂದ ಬೆಳೆದಂತಹ ಸ್ಥಳೀಯ ಅಥವಾ ಸಂರಕ್ಷಿತ ಫ್ಯಾಶನ್ ಫ್ರುಟ್ ಮತ್ತು ಪಪ್ಪಾಯ ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಬಹುದು. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಬಿಡುಗಡೆಗೊಂಡಿರುವಂತಹ ತಳಿಗಳ ಹಣ್ಣುಗಳನ್ನು ಪ್ರದರ್ಶಿಸುವಂತಿಲ್ಲ ಎಂದರು.ಹಣ್ಣಿನ ವಿಜ್ಞಾನಿ ಡಾ.ಮುರಳಿಧರ್ ಮಾತನಾಡಿ, ಪ್ರದರ್ಶಿಸಲ್ಪಟ್ಟ ಫ್ಯಾಶನ್ ಫ್ರುಟ್ ಮತ್ತು ಪಪ್ಪಾಯ ಹಣ್ಣುಗಳಲ್ಲಿ ಉತ್ತಮವಾದ ಮತ್ತು ವಿಶೇಷವಾದ ಗುಣಗಳನ್ನು ಹೊಂದಿರುವ ಮೂರು ಹಣ್ಣಿನ ಮಾದರಿಗಳನ್ನು ಆಯ್ಕೆ ಮಾಡಿ, ಮೊದಲನೇ ಬಹುಮಾನವಾಗಿ 10 ಸಾವಿರ ರು., ಎರಡನೇ ಬಹುಮಾನ 7 ಸಾವಿರ ರು. ಹಾಗೂ ಮೂರನೇ ಬಹುಮಾನವಾಗಿ 3 ಸಾವಿರ ರು. ನೀಡಿ ಪ್ರೋತ್ಸಾಹಿಸಲಾಗುವುದು. ಅಲ್ಲದೇ ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಿದ ಎಲ್ಲಾ ಬೆಳೆಗಾರರಿಗೆ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ಅಲ್ಲದೇ ಕಾರ್ಯಕ್ರಮದಲ್ಲಿ ಪ್ರದರ್ಶಿಸಲ್ಪಟ್ಟ ಫ್ಯಾಶನ್ ಫ್ರುಟ್ ಮತ್ತು ಪಪ್ಪಾಯ ಹಣ್ಣುಗಳ ಉತ್ತಮವಾದ ಮತ್ತು ವಿಶೇಷವಾದ ಗುಣಗಳನ್ನು ಹೊಂದಿರುವ ಹಣ್ಣಿನ ಮಾದರಿಗಳನ್ನು ಗುರುತಿಸಿ ಸಂರಕ್ಷಿಸುವುದು, ಹಣ್ಣಿನ ಬಗ್ಗೆ ಅರಿವನ್ನು ಮೂಡಿಸುವುದು ಮತ್ತು ಅವುಗಳ ಬಗ್ಗೆ ಉತ್ತಮ ಕೃಷಿ ಪದ್ದತಿಗಳು ಮತ್ತು ಮೌಲ್ಯವರ್ಧನೆ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದರು.ವಿಜ್ಞಾನಿ ಎ.ಟಿ.ರಾಣಿ ಮಾತನಾಡಿ, ಆದ್ರ ಉಷ್ಣ ವಲಯದ ವಾತಾವರಣದಲ್ಲಿ ಬೆಳೆದಿರುವ ಫ್ಯಾಶನ್ ಫ್ರುಟ್ ಮತ್ತು ಪಪ್ಪಾಯ ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಬಹುದು. ಒಬ್ಬ ಬೆಳೆಗಾರ ಎಷ್ಟು ಮಾದರಿಗಳನ್ನು ಬೇಕಾದರೂ ಪ್ರದರ್ಶಿಬಹುದು. ಆದರೆ ಫ್ಯಾಶನ್ ಫ್ರುಟ್ ಮತ್ತು ಪಪ್ಪಾಯ ಹಣ್ಣಿನ ಮಾದರಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುವಂತೆ ಎಚ್ಚರ ವಹಿಸಬೇಕೆಂದರು.ಹಣ್ಣು ವಿಜ್ಞಾನಿ ನಯನ ದೀಪಕ್ ಸುದ್ದಿಗೋಷ್ಠಿಯಲ್ಲಿದ್ದರು.