ಕಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿ: ಜೈಶಂಕರ್‌

| Published : Jul 30 2025, 01:23 AM IST

ಕಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿ: ಜೈಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಜನತಾ ನ್ಯಾಯಾಲಯ ಕಚೇರಿಯಲ್ಲಿ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಾಯಂ ಜನತಾ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳನ್ನು ಅತ್ಯಂತ ಸರಳ ಮತ್ತು ಸುಲಲಿತವಾಗಿ ಇತ್ಯರ್ಥಪಡಿಸಲಾಗುತ್ತದೆ ಎಂದು ಜನತಾ ನ್ಯಾಯಾಲಯದ ಅಧ್ಯಕ್ಷ ಹಾಗೂ ನ್ಯಾಯಾಧೀಶ ಜೈಶಂಕರ್ ತಿಳಿಸಿದ್ದಾರೆ.ನಗರದ ಜನತಾ ನ್ಯಾಯಾಲಯ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಯಂ ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಇಬ್ಬರು ಸದಸ್ಯರಿದ್ದಾರೆ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಪಡಿಸಲಾಗುತ್ತಿದೆ. ಪ್ರಕರಣ ದಾಖಲು ಪ್ರಕ್ರಿಯೆ ಅತ್ಯಂತ ಸರಳವಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಇತ್ಯರ್ಥಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಯಂ ಜನತಾ ನ್ಯಾಯಾಲಯವು ಪರ್ಯಾಯ ಪರಿಹಾರ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಪೂರ್ಣ ಪ್ರಮಾಣದ ನ್ಯಾಯಾಧೀಶರೇ ಸೇವೆಯಲ್ಲಿರುತ್ತಾರೆ. ಸರಳ ದಾಖಲೆ ಪ್ರಕ್ರಿಯೆ ಮತ್ತು ಅಗತ್ಯವಿದ್ದರೆ ಮಾತ್ರ ಸಾಕ್ಷಿ ವಿಚಾರಣೆ ನಡೆಯಲಿದೆ. ಯಾವುದೇ ನ್ಯಾಯಾಲಯ ಶುಲ್ಕ ಇರುವುದಿಲ್ಲ. ಸಾರಿಗೆ ಸೇವೆ, ಅಂಚೆ, ವಿದ್ಯುತ್, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್, ವಿಮೆ, ವೈದ್ಯಕೀಯ ನಿರ್ಲಕ್ಷ್ಯತೆ ಮತ್ತಿತರ ಪ್ರಕರಣಗಳನ್ನು ಇಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ವಿವಿಧ ಸಾಲ ಸಂಬಂಧಿತ ವ್ಯಾಜ್ಯಗಳನ್ನು ಕೂಡ ಇಲ್ಲಿ ಪರಿಹರಿಸಿಕೊಳ್ಳಬಹುದು. ಇಲ್ಲಿನ ಆದೇಶವು ಅಂತಿಮವಾಗಿದ್ದು ಮೇಲ್ಮನವಿಗೆ ಅವಕಾಶವಿಲ್ಲ. 1 ಕೋಟಿ ರು.ವರೆಗಿನ ಮೊತ್ತದ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಅತಿ ಸಣ್ಣ ಮೊತ್ತದ ಪ್ರಕರಣಗಳನ್ನು ಕೂಡ ದಾಖಲಿಸಬಹುದು ಎಂದು ತಿಳಿಸಿದರು.

ಕಾಯಂ ಜನತಾ ನ್ಯಾಯಾಲಯವು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 6ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದೆ. ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿಯನ್ನು ಹೊಂದಿದೆ ಎಂದು ಜೈಶಂಕರ್‌ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಜೈಬುನ್ನೀಸಾ, ಕಾಯಂ ಜನತಾ ನ್ಯಾಯಾಲಯದ ಸದಸ್ಯರಾದ ಫಜಲ್ ರಹೀಮ್, ಲಾವಣ್ಯ ರೈ ಹೆಗ್ಡೆ ಇದ್ದರು.