ಭಟ್ಕಳ ರಾಘವೇಂದ್ರ ಮಠದಲ್ಲಿ ಬೃಹತ್ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ಭಟ್ಕಳ

ಉಪವಾಸವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಶುದ್ಧೀಕರಣಕ್ಕೂ ಸಹಕಾರಿಯಾಗುತ್ತದೆ. ಏಕಾದಶಿಯಂದು ಉಪವಾಸ ವ್ರತ ಆಚರಿಸುವುದರಿಂದ ದೇಹದಲ್ಲಿ ರಕ್ತ ಶುದ್ಧೀಕರಣದ ಜೊತೆಗೆ ರಕ್ತದ ಹರಿವು ಉತ್ತಮವಾಗಿರುತ್ತದೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಭಾನುವಾರ ಭಟ್ಕಳದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಜಿಎಸ್‌ಎಸ್ ಹಾಗೂ ಉಡುಪಿ ಜಿಲ್ಲಾ ಬ್ಲಡ್ ಬ್ಯಾಂಕ್ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ರಕ್ತದಾನ ಶಿಬಿರದ ಕುರಿತು ಮಾಹಿತಿ ಪಡೆದ ಶ್ರೀಗಳು, ರಕ್ತ ಸಂಗ್ರಹಿಸುವಾಗ ಅನುಸರಿಸುವ ಮಾನದಂಡಗಳ ಬಗ್ಗೆ ವಿಚಾರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ಏಕಾದಶಿ ಉಪವಾಸವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರೆ ದೇಹವು ಸದೃಢವಾಗಿರುತ್ತದೆ. ಉಪವಾಸದಿಂದ ದೇಹದ ಅಂಗಾಂಗಗಳ ಶುದ್ಧೀಕರಣವಾಗುವುದರ ಜೊತೆಗೆ ಮನಸ್ಸು ಸಹ ಪರಿಶುದ್ಧವಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ಆಚರಿಸಲ್ಪಡುವ ಉಪವಾಸಗಳಿಗೆ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವವಿದೆ ಎಂದು ತಿಳಿಸಿದರು.


ಬೆಳಗ್ಗೆ ೯ ಗಂಟೆಗೆ ಆರಂಭಗೊಂಡ ರಕ್ತದಾನ ಶಿಬಿರ ಮಧ್ಯಾಹ್ನ ೧೨ ಗಂಟೆಯವರೆಗೆ ನಡೆಯಿತು. ಸಮಾಜ ಬಾಂಧವರು ಉತ್ಸಾಹದಿಂದ ಭಾಗವಹಿಸಿ ಒಟ್ಟು ೬೬ ಯೂನಿಟ್ ರಕ್ತ ದಾನ ಮಾಡುವ ಮೂಲಕ ರಕ್ತದಾನ ಸೇವೆಗೆ ಉತ್ತಮ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಪ್ರದೀಪ್ ಜಿ. ಪೈ, ರಾಜೇಶ್ ನಾಯಕ, ವಡೇರ ಮಠದ ಅಧ್ಯಕ್ಷ ನರೇಂದ್ರ ನಾಯಕ, ಜಿಎಸ್‌ಎಸ್ ಅಧ್ಯಕ್ಷ ಗಿರಿಧರ ನಾಯಕ, ಡಾ. ಸವಿತಾ ಕಾಮತ್, ಅರವಿಂದ ಪೈ, ಶಿರಾಲಿ ಪವನ ಪ್ರಭು, ಅರ್ಚಕ ಸಂತೋಷ ಆಚಾರ್ಯ ಹಾಗೂ ಉಡುಪಿ ಬ್ಲಡ್ ಬ್ಯಾಂಕ್‌ನ ಡಾ. ವೀಣಾ ಉಪಸ್ಥಿತರಿದ್ದರು.