ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಸಾದದಲ್ಲಿ ಕೊಬ್ಬು ಮಿಶ್ರಣ ಮಾಡಿದ್ದು ಜಗತ್ತಿಗೆ ಮಾಡಿದ ಮಹಾ ಮೋಸ. ಆ ಪುಣ್ಯಾತ್ಮ (ಜಗನ್) ಮಾಡಿದ ಕೃತ್ಯಕ್ಕೆ ಕೇಸ್ ದಾಖಲಿಸಿ, ಆತನನ್ನು ಜೈಲಿಗೆ ಕಳಿಸಬೇಕು. ಇದು ಆಂತರಿಕವಾಗಿ ಕ್ರಿಶ್ಚಿಯನ್ ಮಿಶಿನರಿಗಳು ಮಾಡಿದ ಕೆಲಸ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.ನಗರದಲ್ಲಿ ಭಾನುವಾರ ಬಗ್ಗೆ ಮಾತನಾಡಿರುವ ಅವರು, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬಿನಂಶ ಮಿಶ್ರಣ ಮಾಡಿ ಭಂಗ ತರುವ ಕೆಲಸ ಆಗಿದೆ. ಈಗ ಜಗನ್ಮೋಹನರೆಡ್ಡಿ ನಾವು ಮಾಡಿಲ್ಲ ಅಂತಾರೆ. ಏಕೆ ಲ್ಯಾಬ್ ರಿಪೋರ್ಟ್ ಬಗ್ಗೆ ಅವರಿಗೆ ನಂಬಿಕೆ ಇಲ್ಲವಾ? ಈ ಹಿಂದೆಯೇ ಅಲ್ಲಿನ ಅರ್ಚಕರು ಹೇಳಿದ್ದರೂ ಇವರು ತಾತ್ಸಾರ ಮಾಡಿದ್ದಾರೆ ಎಂದು ದೂರಿದರು.ಮಾಜಿ ಸಿಎಂ ಜಗನ್ಮೋಹನರೆಡ್ಡಿ ಕೂಡ ಮತಾಂತರ ಆದ ಕ್ರಿಶ್ಚಿಯನ್. ಈಗಾಗಲೇ ವಿದೇಶಿ ಕ್ರಿಶ್ಚಿಯನ್ ಮಿಶಿನರಿಗಳು ಬಹಿರಂಗವಾಗಿಯೇ ಸಾಕಷ್ಟು ಜನರನ್ನು ಮತಾಂತರ ಮಾಡಿವೆ. ಇದು ಆಂತರಿಕವಾಗಿ ಕ್ರಿಶ್ಚಿಯನ್ ಮಿಶಿನರಿಗಳು ಮಾಡಿದ ಕೆಲಸ ಎಂದರು.
ಯತ್ನಾಳ ಪ್ರೀತಿಯಿಂದ ಹೇಳಿದ್ದಾರೆ:ಈಶ್ವರಪ್ಪನವರನ್ನು ಪಕ್ಷಕ್ಕೆ ತರುತ್ತೇವೆಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ನನ್ನ ಮೇಲಿನ ಪ್ರೀತಿ, ವಿಶ್ವಾಸದಿಂದ, ಹಿಂದುತ್ವದಿಂದ ಹಾಗೆ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಸೇರೋದು ಬಿಡೋದು ಆಮೇಲಿನ ವಿಚಾರ. ನಾನು ಬಿಜೆಪಿ ಬಿಟ್ಟಿದ್ದು ಪಕ್ಷದಲ್ಲಿನ ಪಕ್ಷಪಾತದಿಂದ. ಬಿಜೆಪಿಯಲ್ಲಿನ ಹೊಂದಾಣಿಕೆ ಹೋಗಬೇಕು, ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿರುವ ಪಕ್ಷ ಆಗಬಾರದು. ಇದನ್ನು ಕೇಂದ್ರ ಗಮನಿಸಲಿ ಎಂದು ನಾನು ಲೋಕಸಭೆಗೆ ಸ್ಪರ್ಧಿಸಿದ್ದೆ ಎಂದು ಸ್ಪಷ್ಟಪಡಿಸಿದರು.ಕುರ್ಚಿ ಮೇಲೆ ಎಲ್ಲರ ಕಣ್ಣು:
ಸಿಎಂ ಕುರ್ಚಿ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಅವರ ಕುರ್ಚಿ ಅಲುಗಾಡಲ್ಲ ಎಂದು ಮೇಲ್ನೋಟಕ್ಕೆ ಬೆಂಬಲ ಕೊಡ್ತಾರೆ. ಎಂ.ಬಿ.ಪಾಟೀಲ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ ಆಗುವ ಹಂಬಲವಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೋ, ಜೈಲಿಗೆ ಹೋಗ್ತಾರೊ ಗೊತ್ತಿಲ್ಲ ಎಂದರು.ಮಾಜಿ ಸಿಎಂ ಯಡಿಯೂರಪ್ಪ ಡಿನೊಟಿಫಿಕೇಷನ್ ಪ್ರಕರಣ ಲೋಕಾ ವಿಚಾರಣೆ ಶುರು ಮಾಡಿರುವ ವಿಚಾರದ ಮಾತನಾಡಿದ ಅವರು, ಕೇಸ್ ಏನಾಯ್ತು ಎಂಬುವುದು ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಇಂದು ಸೈದ್ಧಾಂತಿಕ ಚರ್ಚೆಗಳು ನಡೆಯುತ್ತಿಲ್ಲ. ಎಲ್ಲರಲ್ಲೂ ವೈಯಕ್ತಿಕ ಅಟ್ಯಾಕ್ (ದಾಳಿ) ನಡೆಯುತ್ತಿದೆ. ಪ್ರಸ್ತುತ ರಾಜಕಾರಣ ಜನರಿಗೆ ಬೇಜಾರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮುನಿರತ್ನ ಪ್ರಕರಣ ಸಂಬಂಧ ಗರಂ ಆದ ಈಶ್ವರಪ್ಪ, ಆ ಬಗ್ಗೆ ನಾನು ಮಾತನಾಡಲ್ಲ, ಮಾತನಾಡಲು ಅಸಹ್ಯವಾಗುತ್ತದೆ. ದಿನ ಬೆಳಗಾದರೇ ಮುನಿರತ್ನ, ಪ್ರಜ್ವಲ ರೇವಣ್ಣ, ದರ್ಶನ ಬಗ್ಗೆಯೇ ಬರುತ್ತೆ. ಹೆಣ್ಣುಮಕ್ಕಳು ಆಟದ ಬೊಂಬೆಗಳಾಗಿದ್ದಾರೆ. ಈ ರೀತಿ ಘಟನೆಗಳು ನಡೆಯುತ್ತಿರುವುದು ವಿಷಾದನೀಯ ಎಂದು ಅಸಮಧಾನ ವ್ಯಕ್ತಪಡಿಸಿದರು.ಸಿದ್ದರಾಮಯ್ಯನವರು ಹಲವು ಪ್ರಾಜೆಕ್ಟ್ ರದ್ದು ಮಾಡಿದ ವಿಚಾರಕ್ಕೆ ಕಿಡಿಕಾರಿದ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರ ಇದ್ದಾಗ ಮಾಡಿದ್ದ 1093 ಯೋಜನೆಗಳನ್ನು ರದ್ದು ಮಾಡಿದ್ದಾರೆ. ಈಗ ಅವೆಲ್ಲ ಅರ್ಧಂಬರ್ಧ ಕೆಲಸ ಆಗಿರುವ ಕಟ್ಟಡಗಳನ್ನು ರದ್ದು ಮಾಡಿದ್ದಾರೆ. ಇದು ಹಿಂದುಳಿದ, ದಲಿತರಿಗೆ ಮಾಡಿದ ಮೋಸ. ಸಿದ್ದರಾಮಯ್ಯನವರೇ ನೀವು ಹಿಂದುಳಿದ ದಲಿತರ ಚಾಂಪಿಯನ್ ಅನಿಸಿಕೊಂಡವರು. ಇದೀಗ ಅನ್ಯಾಯದ ಆಪಾದನೆ ಹೊತ್ತುಕೊಳ್ಳಬೇಡಿ. ನೀವು ರದ್ದು ಮಾಡಿದ ಯೋಜನೆಗಳನ್ನು ಪೂರೈಸಲು ಹಣ ಕೊಡಿ ಎಂದು ಒತ್ತಾಯಿಸಿದರು.ಮೀಸಲಾತಿ ವಿಚಾರ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲ ಸಮಾಜಗಳು ಮೀಸಲಾತಿ ಕೇಳುತ್ತಾರೆ. ಅದು ತಪ್ಪಲ್ಲ, ಕುರುಬರನ್ನು ಎಸ್ಟಿಗೆ ಸೇರಿಸಬೇಕೆಂದು ಇತ್ತು. ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಎಸ್ಟಿಗೆ ಸೇರಿಸಬೇಕು ಎಂದು ರೆಡಿ ಮಾಡಿದ್ದನ್ನು ಈಗ ಸಿದ್ದರಾಮಯ್ಯ ಕೇಂದ್ರಕ್ಕೆ ಕಳಿಸಿದ್ದಾರೆ ಎಂದು ತಿಳಿಸಿದರು.ಅಯೋಧ್ಯೆಯಲ್ಲೂ ಲುಡ್ಡು ಹಂಚಿಕೆ:ತಿರುಪತಿ ಲಡ್ಡು ಅಯೋಧ್ಯೆಗೂ ಹೋಗಿತ್ತು. ರಾಮ ಮಂದಿರದ ಉದ್ಘಾಟನೆ ದಿನ ಜಗನ್ಮೋಹನರೆಡ್ಡಿ ಅವರು ಮೂರು ಲಕ್ಷದಷ್ಟು ಲಡ್ಡುಗಳನ್ನು ಕಳಿಸಿದ್ದರು ಎಂದು ಅಯೋಧ್ಯೆಯ ಅರ್ಚಕರು ಹೇಳಿದ್ದಾರೆ. ಅಲ್ಲದೆ, ತಿರುಪತಿಯಿಂದ ಬಂದಿದ್ದ ಲಡ್ಡುವನ್ನು ಹಂಚಿದ್ದಾಗಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದು ಶೇ.100ರಷ್ಟು ಕ್ರಿಶ್ಚಿಯನ್ ಮಿಶಿನರಿಗಳ ಕೈವಾಡ. ಇದರಲ್ಲಿ ವಿದೇಶಿಗರ ಕೈವಾಡ 100 ಪರ್ಸೆಂಟ್ ಇದೆ. ಇದನ್ನು ಸಿಎಂ ಚಂದ್ರಬಾಬು ನಾಯ್ಡು ಅವರು ಸಿಬಿಐಗೆ ಕೊಡಬೇಕು. ಇದು ಸಿಬಿಐ ತನಿಖೆ ಆಗಲೇಬೇಕು. ಆಗ ಇದರಲ್ಲಿನ ಕ್ರಿಶ್ಚಿಯನ್ ಮಿಶಿನರಿಗಳು, ತಪ್ಪಿತಸ್ಥರು ಯಾರ್‍ಯಾರು ಇದ್ದಾರೋ ಎಲ್ಲರೂ ಹೊರಗೆ ಬರ್ತಾರೆ. ದೇವರ ದಯೆಯಿಂದ ದೇಶದ ಎಲ್ಲ ಪಕ್ಷಗಳ ನಾಯಕರು ಇದನ್ನು ಖಂಡಿಸಿದ್ದಾರೆ ಎಂದರು.
ದಾವಣಗೆರೆಯಲ್ಲಿನ ಘಟನೆಯಲ್ಲಿ ತಪ್ಪಿತಸ್ಥರ ಮೇಲೆ ಅಲ್ಲಿನ ಪೊಲೀಸರು, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಲ್ಲಿನ ಎಸ್‌ಪಿ, ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಗಮಂಗಲದಲ್ಲಿ ಕಲ್ಲು ತೂರಾಟ ಮಾಡಿದರು, ಪೆಟ್ರೋಲ್ ಬಾಂಬ್ ಎಸೆದರು, ಏನು ಕ್ರಮ ಆಗಿಲ್ಲ. ಘಟನೆಯೇ ಆಗಿಲ್ಲ, ಅಲ್ಲಿನ ಪೊಲೀಸರು ಅದರ ಬಗ್ಗೆ ನಮಗೆ ಗೊತ್ತೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ನಿಜವಾಗಿಯೂ ದಾವಣಗೆರೆಯಂತೆ ನಾಗಮಂಗಲದಲ್ಲೂ ಕ್ರಮಕೈಗೊಳ್ಳಬೇಕು.- ಕೆ.ಎಸ್.ಈಶ್ವರಪ್ಪ,
ಮಾಜಿ ಡಿಸಿಎಂ