ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅಭಿಪ್ರಾಯಪಟ್ಟರು.ಪಟ್ಟಣದ ಸಂಗಮೇಶ ಚಿತ್ರಮಂದಿರದ ಹತ್ತಿರದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ, ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಭವಿಷ್ಯ ರೂಪಿಸುವ ನಿರ್ಮಾತೃಗಳಾಗಿದ್ದಾರೆ. ಅವರ ಕೃಪೆಯಿಂದಲೇ ನಾವೆಲ್ಲರೂ ಇಂದು ಇಂತಹ ವೇದಿಕೆ ಮೇಲೆ ನಿಂತಿರುವುದು. ಆದರೆ ಕೆಲವು ದಿನಗಳಲ್ಲಿ ಶಿಕ್ಷಕರ ಮೇಲೆ ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಮೂಲಕ ಶಿಕ್ಷಕರ ಮೇಲೆ ಪ್ರಕರಣ ದಾಖಲಿಸುವಾಗ ನಮಗೆ ತುಂಬಾ ಬೇಸರವಾಗುತ್ತದೆ. ವೈಯಕ್ತಿಕ ದ್ವೇಷಗಳ ಹಿನ್ನೆಲೆ ಶಿಕ್ಷಕರ ಮೇಲೆ ಇಂತಹ ಪ್ರಕರಣಗಳು ದಾಖಲಿಸಲ್ಪಡುತ್ತವೆ. ಶಿಕ್ಷಕರು ಸದಾ ಸ್ಮರಣೀಯರಾಗಿರುತ್ತಾರೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಿಕ್ಷಣ ಕ್ಷೇತ್ರ ಪವಿತ್ರವಾದ ಕ್ಷೇತ್ರ, ವಿದ್ಯಾರ್ಥಿಗಳಲ್ಲಿ ಹೃದಯವಂತಿಕೆ ನಿರ್ಮಾಣ ಮಾಡುವ ಕಾರ್ಯ ಶಿಕ್ಷಕರದ್ದಾಗಿದೆ. ನಡೆ, ನುಡಿ, ಆಚಾರ, ವಿಚಾರ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ದೇಶಕ್ಕೆ ಬೇಕಾಗಿದ್ದು ಹೃದಯವಂತಿಕೆ ಮಕ್ಕಳು, ಮಕ್ಕಳಲ್ಲಿ ನೈತಕತೆ, ಆಚಾರ, ವಿಚಾರ ಬೆಳೆಸುವ ಕಾರ್ಯ ಶಿಕ್ಷಕರಿಂದಾಗ ಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಂಜೀವಕುಮಾರ ಪಂಡರಗಿರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಅಶೋಕ ರಾಜೋಳೆ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಉಮಾಕಾಂತ ವಾರದ ರೋಟರಿ ಕ್ಲಬ್ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಇದೇ ವೇಳೆ ರೋಟರಿ ಕ್ಲಬ್ ಆಫ್ ಭಾಲ್ಕಿ ವತಿಯಿಂದ ಜಿಲ್ಲೆಯ ಆಯ್ದ ಸುಮಾರು 100 ಶಿಕ್ಷಕರಿಗೆ ನೇಶನ್ ಬಿಲ್ಡರ್ ಅವಾರ್ಡ (ರಾಷ್ಟ್ರ ನಿರ್ಮಾಪಕ ಪ್ರಶಸ್ತಿ) ನೀಡಿ ಗೌರವಿಸಲಾಯಿತು. ಅದರಂತೆ ಪಟ್ಟಣದ ಶಿವಾಜಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು, ಶಿವಾಜಿ ಶಾಲೆಯ ಎಲ್ಲಾ ಶಿಕ್ಷಕರನ್ನು ವೈಯಕ್ತಿಕವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಸದ್ಗುರು ವಿದ್ಯಾಲಯದ ಸಂಸ್ಥಾಪಕ ಸೋಮನಾಥ ಮುದ್ದಾ, ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ ಸಂಸ್ಥಾಪಕ ಡಾ. ಅಮಿತ್ ಅಷ್ಟೂರೆ, ಡಾ. ವಸಂತ ಪವಾರ, ಹಿರಿಯ ಶಿಕ್ಷಕ ನಾಮದೇವರಾವ್ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಒ ಸಹದೇವ ಗೌಡಗಾವೆ, ರೋಟರಿ ಕ್ಲಬ್‌ನ ದತ್ತಾತ್ರಿ ಮೆಹಕರ, ಡಾ. ಸಜ್ಜಲ್ ಬಳತೆ, ಡಾ. ನಿತಿನ್ ಪಾಟೀಲ್, ಡಾ. ಯೋಗೇಶ ಜಾಧವ, ಡಾ. ಪ್ರಭು ಕೋಟೆ ಬೆಳ್ಳೂರ ಉಪಸ್ಥಿತರಿದ್ದರು.