ಸಾರಾಂಶ
ಆಲೂರು: ಆಲೂರು ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ವಿಶೇಷ ಮಹಾ ಸಭೆ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶಾಂತಕೃಷ್ಣ ಹುಣಸುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಆಲೂರು: ಆಲೂರು ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ವಿಶೇಷ ಮಹಾ ಸಭೆ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶಾಂತಕೃಷ್ಣ ಹುಣಸುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರಿಗಾಗಿ, ರೈತರಿಗೋಸ್ಕರ ಇರುವ ಸಂಸ್ಥೆ ತಾಲೂಕು ಸೊಸೈಟಿಯಾಗಿದೆ. ಸಹಕಾರ ಸಂಘಗಳು ರೈತರಿಗೆ ವರದಾನ ಆಗಿವೆ. ಸಂಘದ ವಾರ್ಷಿಕ ಮಹಾಸಭೆಗಳು ಕೇವಲ ಲಾಭ-ನಷ್ಟಗಳ ಬಗ್ಗೆ ಚರ್ಚಿಸುವ ಸಭೆಯಾಗಬಾರದು. ರೈತರಿಗೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಬಗ್ಗೆ ಚರ್ಚೆ ಆಗಬೇಕು. ಪ್ರತಿಯೊಂದು ವಹಿವಾಟಿನಲ್ಲೂ ಸಾರ್ವಜನಿಕರಿಗೆ ಹಾಗೂ ಸಂಘದಲ್ಲಿನ ಷೇರುದಾರರಿಗೆ ಹಲವಾರು ರೀತಿಯ ಯೋಜನೆ ರೂಪಿಸಿದೆ. ಸಹಕಾರ ಸಂಘಗಳ ಮಹತ್ವ ಹೆಚ್ಚು ಇದ್ದು, ಅದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇದೇ ರೀತಿ ಸಂಘ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.ಸಂಘದ ಅಧ್ಯಕ್ಷ ಶಾಂತಕೃಷ್ಣ ಹುಣಸುವಳ್ಳಿ ಮಾತನಾಡಿ, ಆಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಎರಡು ಸಾವಿರ ಸದಸ್ಯರನ್ನ ಹೊಂದಿದೆ. 2023-24ನೇ ಸಾಲಿನಲ್ಲಿ ಒಟ್ಟು 8 ಕೋಟಿ ವ್ಯವಹಾರವನ್ನ ನಡೆಸಿದ್ದು. ಅಲ್ಪಾವಧಿ ಬೆಳೆಸಾಲವಾಗಿ 5.20 ಕೋಟಿ ರು.ಗಳನ್ನು ಮತ್ತು ಮಧ್ಯಮಾವಧಿ ಕೃಷಿ ಸಾಲವಾಗಿ 2.80 ಕೋಟಿ ರು. ಗಳನ್ನು ನೀಡಲಾಗಿದೆ. ಸಹಕಾರ ಸಂಘಗಳು ಮುಕ್ತವಾಗಿ ಕೆಲಸ ಮಾಡಬೇಕು. ಸಹಕಾರ ಸಂಘಗಳ ಉಳಿವಿನಲ್ಲಿ ರೈತರ ಹಿತ ಮತ್ತು ಬಲವರ್ಧನೆಯು ಅಡಗಿದೆ. ಹಾಗಾಗಿ ಪಕ್ಷಾತೀತವಾಗಿ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಎಲ್ಲಾ ರಾಜಕಾರಣಿಗಳು ಪಕ್ಷಬೇಧ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.
ಇದೇ ಸಂದರ್ಭದಲ್ಲಿ ಆಲೂರು ಸೊಸೈಟಿಯಲ್ಲಿ ಕಳೆದ 23 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮಂಜುನಾಥ್ ಅವರಿಗೆ ಬೀಳ್ಕೊಡುಗೆ, ಸನ್ಮಾನವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟೇಗೌಡ, ನಿರ್ದೇಶಕರುಗಳಾದ ಸಂದೇಶ ಹಳೆ ಆಲೂರು, ಶಿವಣ್ಣ, ಮಲ್ಲೇಶ್, ಕಾಂತರಾಜು, ರಘುಕುಮಾರ್, ತೌಫಿಕ್ ಅಹಮದ್, ಪ್ರಕಾಶ್, ವಿನೋದ, ರೇಖಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಅಕೌಂಟೆಂಟ್ ಶೇಖರ್ ಸೇರಿದಂತೆ ಮುಂತಾದವರು ಹಾಜರಿದ್ದರು.