ಭೀಕರ ಅಪಘಾತ: ಕಾರು ಉರುಳಿ 6 ಜನರ ದುರ್ಮರಣ

| Published : Jul 02 2025, 12:20 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ಹಿಂದೂಪುರ ರಾಜ್ಯ ಹೆದ್ದಾರಿಯ ಮಾಕಳಿದುರ್ಗ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಮೃತಪಟ್ಟಿದ್ದಾರೆ.

ದೊಡ್ಡಬಳ್ಳಾಪುರ: ತಾಲೂಕಿನ ಹಿಂದೂಪುರ ರಾಜ್ಯ ಹೆದ್ದಾರಿಯ ಮಾಕಳಿದುರ್ಗ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿಗಳಾದ ಈಶ್ವರಪ್ಪ(75), ಪುರುಷೋತ್ತಮ(75), ಕಾಳಪ್ಪ(68), ನಾರಾಯಣಪ್ಪ(70), ಗೋಪಿನಾಥ್‌(56) ಹಾಗೂ ಕಾರು ಚಾಲಕ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.

ತಾಲೂಕಿನ ಮಾಕಳಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಂಗಳವಾರ ಬೆಳಗ್ಗೆ ದೊಡ್ಡಬಳ್ಳಾಪುರದಿಂದ ಭೀಮೇಶ್ವರ ಬೆಟ್ಟಕ್ಕೆ ಇನ್ನೋವಾ ಕಾರಿನಲ್ಲಿ 8 ಮಂದಿ ಹೊರಟಿದ್ದರು.

ಗೌರಿಬಿದನೂರು ರಸ್ತೆಯ ಮಾಕಳಿ ಬಳಿ ಓವರ್ ಟೇಕ್ ಮಾಡುವ ವೇಳೆ ಎದುರಿಗೆ ಕೆಎಸ್ ಆರ್ ಟಿಸಿ ಬಸ್ ಬಂದಿದೆ. ಈ ವೇಳೆ ಎಡಕ್ಕೆ ಕಾರನ್ನು ಚಲಿಸುವಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೋಟೋ-

1ಕೆಡಿಬಿಪಿ1- ದೊಡ್ಡಬಳ್ಳಾಪುರದ ಮಾಕಳಿದುರ್ಗ ಬಳಿ ಸಂಭವಿಸಿದ ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಕಾರಿನಲ್ಲಿ ಸಿಲುಕಿರುವ ಮೃತದೇಹಗಳು.

1ಕೆಡಿಬಿಪಿ2- ಮಾಕಳಿದುರ್ಗ ಬಳಿ ಉರುಳಿ ಬಿದ್ದ ಕಾರು.