ಪತ್ನಿಗೆ ಮಾರಣಾಂತಿಕ ಹಲ್ಲೆ: ಕತ್ತಿ ಹಿಡಿದು ಕುಣಿದು ಸಂಭ್ರಮಿಸಿದ ಪತಿ!

| Published : Aug 05 2024, 12:30 AM IST

ಪತ್ನಿಗೆ ಮಾರಣಾಂತಿಕ ಹಲ್ಲೆ: ಕತ್ತಿ ಹಿಡಿದು ಕುಣಿದು ಸಂಭ್ರಮಿಸಿದ ಪತಿ!
Share this Article
  • FB
  • TW
  • Linkdin
  • Email

ಸಾರಾಂಶ

ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಸ್ಥಳೀಯರ ಸಾಹಸಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಕುಟುಂಬ ಕಲಹದಿಂದ ಪತಿಯೋರ್ವ ಪತ್ನಿಯ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ‌ ಬಾಗಿಲ ಚಿಲಕ‌ ಹಾಕಿ ಮನೆಯೊಳಗೆ ಸಂಭ್ರಮಿಸಿದ ಹೇಯ ಘಟನೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ. ಸಾಗರದ ಸೊರಬ ತಾಲೂಕಿನ ಅನಿತಾ (38) ಮಾರಣಾಂತಿಕ ಹಲ್ಲೆಗೊಳಗಾದವರು. ಆಕೆಯ ಪತಿ ಲಕ್ಷ್ಮಣ (40) ಬಂಧಿತ ಆರೋಪಿ.

ಈ ದಂಪತಿ ಸಾಗರ ಮೂಲದವರಾಗಿದ್ದು, ಬಸ್ರೂರಿನ ವೃದ್ಧಾಶ್ರಮವೊಂದರ ತೋಟದಲ್ಲಿ ಕೆಲಸಕ್ಕೆಂದು ಬಂದಿದ್ದು, ಅಲ್ಲಿನ ಕ್ವಾರ್ಟ್ರಸ್‌ನಲ್ಲಿದ್ದ ಒಂದು ರೂಮಿನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಗಲಾಟೆ ನಡೆದಿದ್ದು, ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆಗೆ ಕಡಿದು ಮಾರಣಾಂತಿಕ ಹಲ್ಲೆ‌ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪತ್ನಿ ಅನಿತಾ ಮನೆಯ ಅಡುಗೆ ಕೋಣೆಯಲ್ಲಿ ರಕ್ತದ‌ ಮಡುವಿನಲ್ಲಿ ಬಿದ್ದಿದ್ದರು. ಇತ್ತ ಪತಿ ಲಕ್ಷ್ಮಣ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಮನೆಯ ಹಾಲ್‌ನಲ್ಲಿ ಕತ್ತಿ ಹಿಡಿದು ಕುಣಿಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ.

ಬೆಚ್ಚಿಬಿದ್ದ ಸ್ಥಳೀಯರು: ಪತ್ನಿಯ ಕುತ್ತಿಗೆ ಕಡಿದ ಬಳಿಕ ಆರೋಪಿ‌ ದೆವ್ವ ಮೈಮೇಲೆ ಬಂದವನಂತೆ‌ ಕತ್ತಿ ಹಿಡಿದು ಮನೆಯೊಳಗೆ ಕುಣಿಯುತ್ತಿದ್ದ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿದರೂ ಕತ್ತಿ ಬೀಸುತ್ತಲೇ ಇದ್ದ ಆರೋಪಿ ಮಾತ್ರ ಹೊರಬರಲಿಲ್ಲ. ಸುಮಾರು 10 ಗಂಟೆಯ ಬಳಿಕ ಅಗ್ನಿಶಾಮಕ ದಳ, ಕಂಡ್ಲೂರು ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಸುಮಾರು ಒಂದೂವರೆ ಗಂಟೆ ಕಾಲ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿ ವಿಫಲವಾದ ಬಳಿಕ ಆರೋಪಿಯ ಏಕಾಗ್ರತೆಯನ್ನು ಬೇರೆಡೆ ಸೆಳೆದು ಮನೆಯ ಹಿಂದಿನ ಕಿಟಕಿ ಒಡೆದು ಅಡುಗೆ ಕೋಣೆಗೆ ನುಗ್ಗಿ ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಹೊರತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಸ್ಥಳೀಯರ ಸಾಹಸಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.