ಮಗನ ಸಮಾಧಿ ಮುಂದೆ ತಂದೆ ರೋಧನೆ

| Published : Jun 08 2025, 01:58 AM IST

ಸಾರಾಂಶ

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಹಾಸನ ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದ ಭೂಮಿಕ್​ ಅವರ ತಂದೆ ಲಕ್ಷ್ಮಣ್ ಅವರ ಆಕ್ರಂದನ, ಮೂಖರೋಧನ ಹೇಳತೀರದಾಗಿದೆ. ಕಳೆದ ಎರಡು ದಿನದಿಂದ ಅವರು ಮಗನ ಸಮಾಧಿ ಮೇಲೆಯೇ ಮಲಗಿ ಮರುಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಲಕ್ಷ್ಮಣ್ ಅವರು ತಾವು ಪ್ರೀತಿಯಿಂದ ಬೆಳೆಸಿದ ಮಗನನ್ನು ಕಳೆದುಕೊಂಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ದಿಮೆ ಮಾಡಿಕೊಂಡು ಸಾಕಷ್ಟು ಸಂಪಾದನೆ ಮಾಡಿದ್ದಾರೆ. ಮಗನಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಮಗ ಕೂಡ ಎಂದಿಗೂ ತಂದೆಗೆ ವಿರುದ್ದವಾಗಿ ಮಾತನಾಡದೆ, ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದ.

ಆದರೆ, ಜೂನ್​ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಭೂಮಿಕ್​ ಸಾವನ್ನಪ್ಪಿದ್ದ. ಅಂದಿನಿಂದ ಮಗ ಇಲ್ಲದನ್ನು ನೆನೆದು ಕಣ್ಣೀರಿಡುತ್ತಿರುವ ಲಕ್ಷ್ಮಣ್‌, ಮಗನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಕಣ್ಣೀರಿಡುತ್ತಿದ್ದಾರೆ. ಮಗನ ಸಮಾಧಿ ಮೇಲೆ ಬಿದ್ದು ಹೊರಳಾಡುತ್ತಿದ್ದಾರೆ.

‘ನನ್ನ ಮಗನನ್ನು ಮಣ್ಣು ಮಾಡಿಲ್ಲ. ಕಳಿಸಿಕೊಟ್ಟಿದ್ದೀನಿ. ಹಾಗಾಗಿ, ಮೂರು ದಿನದ ಹಾಲು-ತುಪ್ಪ ಕಾರ್ಯ ಮಾಡಿಲ್ಲ. ಮಗನಿಗಾಗಿ ಕಷ್ಟಪಟ್ಟು ಇಷ್ಟೆಲ್ಲಾ ಆಸ್ತಿ ಮಾಡಿದ್ದೇನೆ. ಅದನ್ನು ಅನುಭವಿಸೋಕೆ ಅವನೇ ಇಲ್ಲ. ನನಗೆ ಬಂದ ಈ ಪರಿಸ್ಥಿತಿ ಯಾವ ತಂದೆಗೂ ಬರಬಾರದು. ನನ್ನ ಮಗನ ಸಾವಿಗೆ ಹೊಣೆ ಯಾರು? ಸರ್ಕಾರದ ನಿರ್ಲಕ್ಷ್ಯದಿಂದ ನನ್ನ ಮಗನೂ ಸೇರಿ 11 ಅಮಾಯಕರು ಬಲಿಯಾಗಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ಕೊಟ್ಟರೆ ಸತ್ತವರು ಬದುಕಿ ಬರುತ್ತಾರಾ? ಪೊಲೀಸರನ್ನು ಸಸ್ಪೆಂಡ್‌ ಮಾಡಿದರೆ ಪ್ರಯೋಜನವಿಲ್ಲ. ತಪ್ಪು ಮಾಡಿರೋದು ಸರ್ಕಾರ. ದೊಡ್ಡವರ ಮಕ್ಕಳು, ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರಿಗೆ ಏನೂ ಆಗಿಲ್ಲ. ನಮ್ಮಂತ ಅಮಾಯಕರ ಮಕ್ಕಳ ಜೀವ ಹೋಗಿದೆ’ ಎಂದು ಗೋಳಾಡುತ್ತಿದ್ದಾರೆ.