ಮಂಗಳೂರು: ನರ್ಸಿಂಗ್ ಕೇವಲ ರೋಗಿಗಳ ಆರೈಕೆಯಲ್ಲದೆ, ಆಡಳಿತ ಮತ್ತು ಸಂಶೋಧನಾ ಕ್ಷೇತ್ರಗಳಿಗೂ ವಿಸ್ತರಿಸಿದೆ. ಯಾವುದೇ ತಂತ್ರಜ್ಞಾನವು ನರ್ಸ್‌ಗಳ ಮಾನವೀಯ ಸ್ಪರ್ಶವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಭುವನೇಶ್ವರದ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಆಶಾ ಪಿ.ಶೆಟ್ಟಿ ಹೇಳಿದರು.

ಅವರು ಶನಿವಾರ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕಗಳಾದ ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಫಾದರ್ ಮುಲ್ಲರ್ ಸ್ಪೀಚ್ ಆಂಡ್ ಹಿಯರಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ ಮಾಜಿ ಅಸೋಸಿಯೇಟ್ ಡೀನ್ ಡಾ.ವೆಂಕಟರಾಜ ಐತಾಳ್ ಯು. ಮಾತನಾಡಿ, ಜ್ಞಾನ ಮತ್ತು ಕೌಶಲ್ಯದ ಜೊತೆಗೆ ಸೃಜನಶೀಲತೆ ಮತ್ತು ನಾವೀನ್ಯತೆ ಶೈಕ್ಷಣಿಕ ಯಶಸ್ಸಿನ ಮಂತ್ರಗಳಾಗಿವೆ ಎಂದರು. ಬೆಂಗಳೂರಿನ ವಿಶ್ರಾಂತ ಆರ್ಚ್‌ ಬಿಷಪ್ ಡಾ.ಬರ್ನಾರ್ಡ್ ಮೊರಾಸ್ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಫಾದರ್ ಮುಲ್ಲರ್ ಸಂಸ್ಥೆಯು ರೋಗಿಗಳ ಮತ್ತು ಸಂಕಷ್ಟದಲ್ಲಿರುವವರ ಸೇವೆಯ ದ್ಯೋತಕವಾಗಿದೆ. ಕೌಶಲ್ಯದ ಜೊತೆಗೆ ಸಹಾನುಭೂತಿ ಅತಿ ಮುಖ್ಯ ಎಂದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ.ಫೌಸ್ಟಿನ್ ಲೂಕಾಸ್ ಲೋಬೋ, ಆಡಳಿತಾಧಿಕಾರಿಗಳಾದ ಡಾ.ಮೈಕೆಲ್ ಎಲ್.ಸಾಂತುಮಾಯೋರ್, ಫಾ.ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ಕೆ, ಪ್ರಾಂಶುಪಾಲರಾದ ಸಿಸ್ಟರ್ ಡಾ.ಧನ್ಯ ದೇವಸ್ಯ, ಪ್ರೊ.ಸಿಂಥಿಯಾ ಸಾಂತುಮಾಯೋರ್ ಮತ್ತಿತರು ಇದ್ದರು.

ಪದವೀಧರ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರ ಶೈಕ್ಷಣಿಕ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಸಂಸ್ಥೆಯ ಸಂಸ್ಥಾಪಕ ರೆ.ಫಾ.ಆಗಸ್ಟಸ್ ಮುಲ್ಲರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.ಪ್ರಶಸ್ತಿ ಮತ್ತು ಪುರಸ್ಕಾರಗಳು:ಸಮಾರಂಭದಲ್ಲಿ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಕಾಲೇಜ್ ಆಫ್ ನರ್ಸಿಂಗ್ ಹಾಗೂ ಸ್ಪೀಚ್ ಆಂಡ್ ಹಿಯರಿಂಗ್ ವಿಭಾಗದ ಪದವೀಧರರಿಗೆ ಪದವಿ ಪ್ರಮಾಣಪತ್ರ ನೀಡಿ ವೃತ್ತಿಪರ ಪ್ರಮಾಣ ವಚನ ಬೋಧಿಸಲಾಯಿತು.ನರ್ಸಿಂಗ್ ವಿಭಾಗದಲ್ಲಿ ಪ್ರಿಯಾ ಅಸ್ಮಿ ಡಿ ಸೋಜಾ (ಜಿ.ಎನ್.ಎಂ.), ದೀಪಾ ರಾಬರ್ಟ್ ಕೆ (ಬಿಎಸ್ಸಿ ನರ್ಸಿಂಗ್ ), ದಿವ್ಯ ಜ್ಯೋತಿ ಕ್ರಾಸ್ತಾ (ಪಿ.ಬಿ.ಬಿ.ಎಸ್ಸಿ) ಮತ್ತು ಮರ್ಲಿನ್ ಪ್ರಿಯಾ ಮೊರಾಸ್ (ಎಂ. ಎಸ್ಸಿ. ನರ್ಸಿಂಗ್ ) ಅವರು ಅತ್ಯುತ್ತಮ ಸಾಧನೆಗಾಗಿ ಪುರಸ್ಕೃತರಾದರು.


ಸ್ಪೀಚ್ ಮತ್ತು ಹಿಯರಿಂಗ್ ವಿಭಾಗದಲ್ಲಿ ಸ್ತುತಿ ಎಸ್. ಕೋಟ್ಯಾನ್, ನೈನಿಕಾ ಥಾಮಸ್, ಹರ್ಲಿನ್ ಮೆರಿಲ್ ಮೆಂಡೋನ್ಸಾ (ಪ್ರಥಮ ಶ್ರೇಣಿ), ರೇಷ್ಮಾ, ಜೆನಿನ್ ಡಿಸೋಜಾ, ಕ್ಯಾರೊಲ್ ಜೆವಿತಾ ಲೋಬೋ (ಪ್ರಥಮ ಶ್ರೇಣಿ), ಹ್ಯಾಡ್ಲಿನ್ ರೇಚಲ್ ನೊರೊನ್ಹಾ ಮತ್ತು ನೇಹಾ ಆರ್. ಪಾಟೀಲ್ ಕುಲಕರ್ಣಿ ಅವರು ವಿವಿಧ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಗರಿಷ್ಠ ಅಂಕ ಗಳಿಸಿ ಗೌರವಿಸಲ್ಪಟ್ಟರು.ಸಮಗ್ರ ಶ್ರೇಷ್ಠ ಪ್ರಶಸ್ತಿಗಳು:

ರೇಶಲ್ ಮಸ್ಕರೇನ್ಹಸ್ ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಸಮಗ್ರ ಶ್ರೇಷ್ಠತೆ. ಮನಹರ್ ಮುಸ್ಲಿಮಾ ಕಾಸಿಂ ಜಿಎನ್ಎಂನಲ್ಲಿ ಸಮಗ್ರ ಶ್ರೇಷ್ಠತೆ, ಕ್ಯಾರೊಲ್ ಜೆವಿಟಾ ಲೋಬೋ ಬಿ.ಎಎಸ್ಎಲ್ಪಿ ವಿಭಾಗದ 2022-2026ರ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರವನ್ನು ಸ್ವೀಕರಿಸಿದರು. ಚರಿತಾ ಲೂಯಿಸ್ ಮತ್ತು ಡಾ. ಕ್ಯಾಲಿಡಾ ಫ್ರೀಡಾ ಪಿಂಟೋ ನಿರೂಪಿಸಿದರು.