ಸಾರಾಂಶ
ಉಡುಪಿ : ಬರೋಬ್ಬರಿ 22 ವರ್ಷಗಳ ಬಳಿಕ ವೃದ್ಧರೊಬ್ಬರು ತಮ್ಮ ಕುಟುಂಬವನ್ನು ಸೇರಿದ ಮನಮಿಡಿಯುವ ಘಟನೆ ಇಲ್ಲಿನ ಹೊಸಬೆಳಕು ಆಶ್ರಮದಲ್ಲಿ ನಡೆದಿದೆ.
ಕಾಪು ನಿವಾಸಿ ,82 ವರ್ಷ ಪ್ರಾಯದ ಅಣ್ಣಯ್ಯ ಬಂಗೇರ ಯಾವುದೋ ಕಾರಣಕ್ಕೆ ತನ್ನದೇ ಮನೆಯವರೊಂದಿಗೆ ಮುನಿಸಿಕೊಂಡು, ಮನೆ ಬಿಟ್ಟು ಮಜೂರು ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದರು. ಕೆಲವು ಸಮಯದ ಹಿಂದೆ ವಯೋಸಹಜ ಕಾಯಿಲೆಯಿಂದ ಬಳಲುತ್ತಾ ಬಂಗೇರ ಹಾಸಿಗೆ ಹಿಡಿದಿದ್ದರು. ಸ್ಥಳೀಯರು ಕೊಡುತ್ತಿದ್ದ ಅನ್ನ ಆಹಾರ, ಔಷಧೋಪಚಾರದ ನೆರವಿನಿಂದಾಗಿ ಬದುಕಿದ್ದರು.
ತಿಂಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ಮಾಹಿತಿ ಪಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಬಂಗೇರರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಗಣನೀಯವಾಗಿ ಚೇತರಿಸಿಕೊಂಡ ಅವರನ್ನು ನಂತರ ಒಳಕಾಡು ಅವರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಉಡುಪಿಯ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿ, ಹಿರಿಯ ನಾಗರಿಕರ ಸಹಾಯವಾಣಿಗೆ ಮಾಹಿತಿ ನೀಡಿದ್ದರು.
ಅದರಂತೆ ಬಂಗೇರ ನೀಡಿದ ಮಾಹಿತಿಯಿಂದ, ಸಂಬಂಧಿಕರ ವಿಳಾಸ ಪತ್ತೆ ಮಾಡಲಾಯಿತು. ಮಂಗಳವಾರ ಅವರ ಮಗ, ಮಗಳು ಹೊಸಬದುಕು ಆಶ್ರಮಕ್ಕೆ ಬಂದರು. ಮಕ್ಕಳು ತಂದೆಯವರ ಗುರುತು ಹಿಡಿದರೂ, ಬಂಗೇರರು 22 ವರ್ಷ ನಂತರ ಬೆಳೆದಿದ್ದ ಮಕ್ಕಳ ಗುರುತು ಹಿಡಿಯಲು ಕೆಲಹೊತ್ತು ತೆಗೆದುಕೊಂಡರು. ನಂತರ ಬಂಗೇರರು ಮಕ್ಕಳ ಪ್ರೀತಿಯ ಮುಂದೆ ಹಳೆಯದನ್ನೆಲ್ಲವನ್ನೂ ಮರೆತು ಮನೆಗೆ ತೆರಳಿದರು.
ಹೊಸಬೆಳಕು ಆಶ್ರಮದ ವಿನಯಚಂದ್ರ, ಹಿರಿಯ ನಾಗರಿಕ ಸಹಾಯವಾಣಿಯ ಅಶ್ವಿನಿ ಜಿಲ್ಲಾ ಯೋಜನಾ ಸಯೋಜಕಿ ಅಶ್ವಿನಿ, ಆಪ್ತಸಮಲೋಚಕ ರೋಷನ್ ಅಮೀನ್, ಕಾಪು ಪೋಲಿಸ್ ಠಾಣೆಯ ಪೋಲಿಸರು, ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಕರಿಸಿದರು.