ಸಾರಾಂಶ
ವೃತ್ತಿಯಲ್ಲಿ ಮಹದೇವಪ್ಪ ದಂಪತಿ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ಬಂದ ಪ್ರಿಯಾಂಕಾಳನ್ನು ಅಡುಗೆ ಮಾಡುವ ವಿಚಾರದಲ್ಲಿ ತಂದೆ ಮಹದೇವಪ್ಪ ಪ್ರಶ್ನಿಸಿ ಕಟು ಮಾತುಗಳಿಂದ ಬೈದಿದ್ದಾರೆ. ಇದರಿಂದ ಬೇಸತ್ತ ಪ್ರಿಯಾಂಕ ಡೆತ್ ನೋಟ್ ಬರೆದಿಟ್ಟು ಸಂಜೆ 6 ಸುಮಾರಿಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು.
ಕನ್ನಡಪ್ರಭ ವಾರ್ತೆ ಮದ್ದೂರು
ತಂದೆಯ ಕಟು ಮಾತಿನಿಂದ ಬೇಸತ್ತ ಪುತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಚನ್ನೇಗೌಡನ ದೊಡ್ಡಿ ಬಳಿ ಬುಧವಾರ ರಾತ್ರಿ ಜರುಗಿದೆ.ಪಟ್ಟಣದ ಲೀಲಾವತಿ ಬಡಾವಣೆ 5ನೇ ಕ್ರಾಸ್ ನಲ್ಲಿ ವಾಸವಾಗಿರುವ ಮಹದೇವಪ್ಪ ಪುತ್ರಿ ಪ್ರಿಯಾಂಕ (18) ಆತ್ಮಹತ್ಯೆಗೆ ಶರಣಾದವರು.
ಮದ್ದೂರಿನ ಎಚ್. ಕೆ. ವೀರಣ್ಣಗೌಡ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕ, ಬುಧವಾರ ರಾತ್ರಿ 11:30ರ ಸುಮಾರಿಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಗೂಡ್ಸ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವೃತ್ತಿಯಲ್ಲಿ ಮಹದೇವಪ್ಪ ದಂಪತಿ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ಬಂದ ಪ್ರಿಯಾಂಕಾಳನ್ನು ಅಡುಗೆ ಮಾಡುವ ವಿಚಾರದಲ್ಲಿ ತಂದೆ ಮಹದೇವಪ್ಪ ಪ್ರಶ್ನಿಸಿ ಕಟು ಮಾತುಗಳಿಂದ ಬೈದಿದ್ದಾರೆ. ಇದರಿಂದ ಬೇಸತ್ತ ಪ್ರಿಯಾಂಕ ಡೆತ್ ನೋಟ್ ಬರೆದಿಟ್ಟು ಸಂಜೆ 6 ಸುಮಾರಿಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು.
ಈ ಬಗ್ಗೆ ಕುಟುಂಬದವರು ಹುಡುಕಾಟ ನಡೆಸಿದರು ಸಹ ಪತ್ತೆಯಾಗಿರಲಿಲ್ಲ. ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ಕೊಡಲು ಮುಂದಾಗಿದ್ದಾರೆ. ಚನ್ನೇಗೌಡನ ದೊಡ್ಡಿ ಬಳಿ ರೈಲು ಹಳಿ ಮೇಲೆ ಮಹಿಳೆ ಶವ ದೊರಕಿದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ. ನಂತರ ಸ್ಥಳಕ್ಕೆ ಧಾವಿಸಿದ ಪ್ರಿಯಾಂಕಾಳ ತಂದೆ ಹಾಗೂ ಕುಟುಂಬ ವರ್ಗದವರು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಿಯಾಂಕ ಎಂದು ಗುರುತಿಸಿದ್ದಾರೆ. ನಂತರ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ.ಈ ಸಂಬಂಧ ಮಂಡ್ಯ ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ರೈಲ್ವೆ ಇಲಾಖೆ ಪಿಎಸ್ಐ ಮಹೇಶ. ಎಎಸ್ಐ ಫಯಾಜ್ ಪಾಷಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.