ಸಾರಾಂಶ
ಕಾರವಾರ:
ಪ್ರಸ್ತುತ ದೇಶದಲ್ಲಿ ಉದ್ಯಮಕ್ಕೆ ಉತ್ತಮವಾದ ವಾತಾವರಣ ಹಾಗೂ ಬೆಂಬಲ ಇದೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತಿದ್ದು, ಈ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಉದ್ಯಮಗಳನ್ನು ಯಶಸ್ವಿಯಾಗಿ ಬೆಳೆಸಬಹುದು ಎಂದು ಜಿಎಎಸ್‌ಟಿ ಉಪ ಆಯುಕ್ತೆ ಸಹನಾ ಬಾಳ್ಕಲ್ ತಿಳಿಸಿದರು.ಬೆಂಗಳೂರಿನ ಹವ್ಯಕ ಭವನದಲ್ಲಿ ಭಾನುವಾರ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಆಯೋಜಿಸಿದ್ದ ಹವ್ಯಕ ಉದ್ಯಮಿಗಳು ಹಾಗೂ ಕೈಗಾರೋದ್ಯಮಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸಹಜವಾಗಿ ಪರಿಸರದ ಪರಿಚಯ ಇರುವ ಮತ್ತು ವಿಶಿಷ್ಟ ಆಹಾರ ಸಂಸ್ಕೃತಿ ಹೊಂದಿರುವ ಹವ್ಯಕರು ಇಕೋ ಟೂರಿಸಮ್ ಹಾಗೂ ಹವ್ಯಕ ಆಹಾರೋದ್ಯಮ ಇತ್ಯಾದಿಗಳನ್ನು ಸ್ಥಾಪಿಸುವತ್ತ ಯೋಚಿಸಬಹುದು. ಇದು ತಂತ್ರಜ್ಞಾನದ ಯುಗವಾಗಿದ್ದು, ತಂತ್ರಜ್ಞಾನವನ್ನು ಬಳಸಿಕೊಂಡು ಜಾಗತಿಕ ಮಟ್ಟಕ್ಕೆ ಉದ್ಯಮವನ್ನು ಬೆಳೆಸಲು ಆಲೋಚಿಸಬೇಕು ಎಂದು ಸಲಹೆ ನೀಡಿದರು.ಬಿಸಿನೆಸ್ ಬೈಯ್ ಬ್ರಾಹ್ಮಿಣ್ಸ್ ಸಂಸ್ಥಾಪಕ ಅನಂತ ನಾಗರಾಜ್ ಮಾತನಾಡಿ, ನಮ್ಮ ಸಂಘಟನೆಗಳು ಕೇವಲ ಪೂಜೆ - ಪುನಸ್ಕಾರಗಳಿಗೆ ಸೀಮಿತವಾಗಬಾರದು. ಧಾರ್ಮಿಕತೆ ನಮ್ಮ ಮೂಲವೇ ಆದರೂ ಇಂದಿನ ಕಾಲಕ್ಕೆ ಅನುಸಾರವಾಗಿ ನಮ್ಮ ಸಂಘಟನೆಗಳು ವ್ಯಾಪಾರ - ಉದ್ದಿಮೆಗಳಿಗೂ ಪ್ರಾಶಸ್ತ್ಯ ನೀಡುವ ಅವಶ್ಯಕತೆ ಇದೆ. ಸಂಘಟಿತರಾದಾಗ ಎಲ್ಲರೂ ಯಶಸ್ವಿಗಳಾಗಲು ಸಾಧ್ಯ. ಎಲ್ಲ ಕಥೆಗಳಲ್ಲೂ ಬಡ ಬ್ರಾಹ್ಮಣನೊಬ್ಬನಿದ್ದನ್ನು ಎಂದು ಓದಿರುತ್ತೇವೆ. ನಾವು ಬಡ ಬ್ರಾಹ್ಮಣರಾಗಿಯೇ ಇರದೇ, ಬಡಾ ಬ್ರಾಹ್ಮಣರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ, ಸ್ಟಾರ್ಟ್‌ಪ್ ಆರಂಭವಾದ ನಂತರ ವಿಷನ್ ಅಪ್ ಮಾಡಿ ಉದ್ಯಮವನ್ನು ಬೆಳೆಸಿದರೆ ಮಾತ್ರ ಯಶಸ್ಸು ಸಾಧ್ಯ. ಇಲ್ಲದಿದ್ದರೆ ಸ್ಟಾರ್ಟ್‌ಪ್‌ಗಳು ಆರಂಭವಾದಲ್ಲೇ ಎಂಡ್ ಅಪ್ ಆಗುತ್ತದೆ. ಜಗತ್ತು ಎಐ ಬಗ್ಗೆ ಮಾತನಾಡುತ್ತಿದೆ. ಆದರೆ ನಮ್ಮ ಸಮಾಜ ಎನ್‌ಐ(ಸಹಜ ಬುದ್ಧಿಮತ್ತೆ) ಅನ್ನು ಹೊಂದಿದ್ದೇವೆ. ಇದನ್ನು ಬಳಸಿಕೊಂಡು ವೈಯಕ್ತಿಕವಾಗಿ ಯಶಸ್ವಿಯಾಗುವುದಷ್ಟೇ ಅಲ್ಲದೇ ಜಗತ್ತಿನ ಒಳಿತಿಗೆ ಬಳಸಿಕೊಳ್ಳಬೇಕು ಎಂದರು.ಕಾಸಿಯಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಾಗರ್, ಗೂಗಲ್‌ನ ತಂತ್ರಜ್ಞ ನಾರಾಯಣ ಹೆಗಡೆ, ಟೊಯೋಟಾ ಇಂಡಸ್ಟ್ರೀಸ್‌ನ ಡಿಜಿಎಂ ಸದಾನಂದ ಹರಿದಾಸ, ಮಹಾಸಭೆಯ ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್, ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಸಂಚಾಲಕರಾದ ರಾಮಚಂದ್ರ ಭಟ್ ಕೆಕ್ಕಾರು ಹಾಗೂ ಶ್ರೀರಾಮ ಎಂ.ಎನ್. ಇದ್ದರು. ಖ್ಯಾತ ಗಾಯಕ ಗಣೇಶ್ ದೇಸಾಯಿ ತಂಡದವರಿಂದ ನಡೆದ ಭಾವಸಂಜೆ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು.
ಕೈಗಾರಿಕೋದ್ಯಮಿಗಳಿಗೆ ಸನ್ಮಾನಯಶಸ್ವಿ ಉದ್ಯಮಿಗಳಾದ ಪ್ರಸನ್ನ ಶಾಸ್ತ್ರಿ, ರಾಮಕೃಷ್ಣ ನಿಸರಾಣಿ, ಲಕ್ಷ್ಮೀನಾರಾಯಣ ಹೆಗಡೆ, ನಾರಾಯಣ ಪ್ರಸನ್ನ ಹಾಗೂ ಕಿರಣ್ ಜಂಬಾನಿ ಅವರನ್ನು ಹವ್ಯಕ ಮಹಾಸಭೆಯಿಂದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.