ಸಾಗರ ಪೈ ತಾಮಖಡೆಗೆ ಒಲಿದ ಗೆಲವು

| Published : Aug 22 2024, 12:51 AM IST

ಸಾರಾಂಶ

ರಬಕವಿ ಆರಾಧ್ಯ ದೇವರಾದ ಶ್ರೀಮಲ್ಲಿಕಾರ್ಜುನ ಹಾಗೂ ಮಹಾದೇವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಎಲ್ಲರನ್ನು ರಂಜಿಸಿತು. ಫೈನಲ್ ಪಂದ್ಯದಲ್ಲಿ ಕೊಲ್ಹಾಪೂರದ ಗಂಗಾವೇಶದ ಸಾಗರ ಪೈ ತಾಮಖಡೆ ಅವರು ಸೊಲ್ಲಾಪೂರದ ವಿಕಾಸ ಪೈ ದೋತ್ರೆ ವಿರುದ್ಧ ಗೆಲುವು ಸಾಧಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ ಆರಾಧ್ಯ ದೇವರಾದ ಶ್ರೀಮಲ್ಲಿಕಾರ್ಜುನ ಹಾಗೂ ಮಹಾದೇವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಎಲ್ಲರನ್ನು ರಂಜಿಸಿತು. ಫೈನಲ್‌ ಪಂದ್ಯದಲ್ಲಿ ಕೊಲ್ಹಾಪೂರದ ಗಂಗಾವೇಶದ ಸಾಗರ ಪೈ ತಾಮಖಡೆ ಅವರು ಸೊಲ್ಲಾಪೂರದ ವಿಕಾಸ ಪೈ ದೋತ್ರೆ ವಿರುದ್ಧ ಗೆಲುವು ಸಾಧಿಸಿದರು.

ಕೇವಲ ಎರಡೇ ನಿಮಿಷದಲ್ಲಿ ವಿಕಾಸ ಪೈ ದೋತ್ರೆ ಸೈಡ್ ಡಾವ್ ಹೊಡೆದು ಚಿತ್ತ ಮಾಡಲು ಹೋದಾಗ ಶರೀರದ ತೂಕ ಹೆಚ್ಚಿರುವ ಕೊಲ್ಹಾಪೂರ ಸಾಗರ ಪೈ ಇದನ್ನೇ ಲಾಭ ಮಾಡಿಕೊಂಡು ಸೈಡ್ ಡಾವ್‌ನಿಂದ ಬಚಾವಾಗಲು ಯಶಸ್ವಿಯಾಗಿ ಕೊನೆಗೆ ವಿಕಾಸ ಪೈ ಸೈಡ್ ಡಾವ್ ವಿಫಲಗೊಂಡ ಕಾರಣ ಮೈಮೇಲೆ ಹಾಕಿಕೊಂಡು ಕಣದಲ್ಲಿ ಬಿದ್ದ ಪರಿಣಾಮ ಸಾಗರ ಪೈ ತಾಮಖಡೆ ಗೆಲುವು ಸಾಧಿಸಿದರು. ಅದರಂತೆ ಎರಡು ಮತ್ತು ಮೂರನೇಯ ಬಲಾಢ್ಯ ಪೈಲ್ವಾನರಾಗಿ ಕುಸ್ತಿ ಮೈದಾನಕ್ಕಿಳಿದ ಪುಣೆಯ ನಾಗರಾಜ ಪೈ ಬಸಿಡೋಣಿ ಜೊತೆ ಕೊಲ್ಲಾಪೂರದ ಉಮೇಶ ಪೈ ಚಹ್ವಾನ ಮತ್ತು ಜಗದಾಳದ ಸಾಗರ ಪೈ ಉಳ್ಳಾಗಡ್ಡಿ ಜೊತೆ ಸಾಂಗಲಿಯ ಬಾಳು ಪೈ ಅಪರಾಧ ಸಮಬಲ ಸಾಧಿಸಿದರು.

ರಂಜಿಸಿದ ಪೈಲ್ವಾನರು:

ಕೊಲ್ಹಾಪೂರ ಗಂಗಾವೇಶದ ಸಾಗರ ಪೈ ತಾಮಖಡೆ ಜೊತೆ ಸೊಲ್ಲಾಪೂರದ ವಿಕಾಸ ಪೈ ದೋತ್ರೆ, ಪುಣೆಯ ನಾಗರಾಜ ಪೈ ಬಸಿಡೋಣಿ ಜೊತೆ ಕೊಲ್ಹಾಪೂರದ ಉಮೇಶ ಪೈ ಚಹ್ವಾಣ, ಜಗದಾಳದ ಸಾಗರ ಪೈಲ ಉಳ್ಳಾಗಡ್ಡಿ ಜೊತೆ ಸಾಂಗಲಿಯ ಬಾಳು ಪೈ ಅಪರಾಧ ಸೇರಿದಂತೆ ನೂರಾರು ಕುಸ್ತಿಗಳ ಸೆಣಸಾಟ ನೋಡುಗರನ್ನು ರಂಜಿಸಿತು. ಮದಗಜಗಳಂತೆ ಹೋರಾಟ ನಡೆಸಿದ ಕುಸ್ತಿ ಪಟುಗಳು ಜನರ ಪ್ರೋತ್ಸಾಹಕ್ಕೆ, ಸಿಳ್ಳೆಯ ನೀನಾದಕ್ಕೆ ತಲೆ ದೂಗಿದರು. ಕುಸ್ತಿ ಗೆಲ್ಲಲು ನಡೆಸಿದ ವೀರೋಚಿತ ಹೋರಾಟ ಕುಸ್ತಿ ರಸಿಕರ ಮನ ತಣಿಸಿತು. ಅನೇಕ ಕುಸ್ತಿಗಳಿಗೆ ವಿಶೇಷ ಬಹುಮಾನ ನೀಡಲಾಯಿತು.

ಶ್ರೀಗಳಿಂದ ಚಾಲನೆ:

ಸಂಜೆ ೪ ಗಂಟೆಗೆ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀಗುರುಸಿದ್ಧೇಶ್ವರ ಶ್ರೀಗಳು ಕುಸ್ತಿಗೆ ಚಾಲನೆ ನೀಡಿದರು. ಕುಸ್ತಿ ಮೈದಾನವನ್ನು ಪೂಜಿಸಿಲಾಯಿತು. ನಂತರ ಆರಂಭವಾದ ಜಂಗೀ ನಿಕಾಲಿ ಕುಸ್ತಿಗಳು ರಾತ್ರಿ ೯ರ ವರೆಗೆ ಜರುಗಿ ನೆರೆದ ಕುಸ್ತಿಪ್ರೀಯರನ್ನು ರಂಜಿಸಿದವು. ಪುಣೆ, ಇಚ್ಚಲಕರಂಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕುಸ್ತಿಪಟುಗಳು ಆಗಮಿಸಿದ್ದರು.

ಸಮಾರಂಭದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿ, ನಗರದ ಹಿರಿಯರಾದ ದೇವಲ ದೇಸಾಯಿ, ಮಲ್ಲೇಶಪ್ಪ ಕುಚನೂರ, ಮಾಜಿ ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಡಾ. ಎ.ಆರ್. ಬೆಳಗಲಿ, ಸಿದ್ದು ಕೊಣ್ಣೂರ, ಡಾ.ಪದ್ಮಜೀತ್‌ ನಾಡಗೌಡಪಾಟೀಲ, ಶಿವಾನಂದ ಬಾಗಲಕೋಟಮಠ, ಭೀಮಶಿ ಪಾಟೀಲ, ಬಸವರಾಜ ತೆಗ್ಗಿ, ಬಸಪ್ಪ ಬಾಗಿ, ಸುರೇಶ ಪಟ್ಟಣಶೆಟ್ಟಿ, ನೀಲಕಂಠ ಮುತ್ತೂರ ಸೇರಿದಂತೆ ಅನೇಕರು ಇದ್ದರು. ವಲ್ಲಿಸಾಬ ಹುಡೇದಮನಿ, ಬೆಣಕಪ್ಪ ಬೆಕ್ಕೇರಿ, ಹಣಮಂತ ಕೊಡಗನೂರ, ಲಕ್ಕಪ್ಪ ಪಾಟೀಲ, ಹನುಮಂತ ಹನಗಂಡಿ, ರವಿ ಬಸಗೊಂಡನವರ, ರವಿ ಚೋಳಿ ನಿರ್ಣಾಯಕರಾಗಿದ್ದರು.