ಎಫ್‌ಡಿಎ ಅಕ್ರಮ: ಸಹಾಯಕ ಎಂಜಿನಿಯರ್‌ ರುದ್ರಗೌಡ ಬಂಧನ

| Published : Nov 16 2023, 01:15 AM IST

ಸಾರಾಂಶ

ಎಫ್‌ಡಿಎ ಅಕ್ರಮ: ಸಹಾಯಕ ಎಂಜಿನಿಯರ್‌ ರುದ್ರಗೌಡ ಬಂಧನ

ಕನ್ನಡಪ್ರಭ ವಾರ್ತೆ ಅಥಣಿ

ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ್‌ಗೆ ಅಕ್ರಮವಾಗಿ ಹಾಲ್ ಟಿಕೆಟ್ ವಿತರಣೆ ಮಾಡಿದ ಆರೋಪದ ಮೇಲೆ ಬೆಳಗಾವಿ ಜಿಲ್ಲೆಯ ಅಥಣಿಯ ಹಿಪ್ಪರಗಿ ಏತ ನೀರಾವರಿ ಯೋಜನೆಯ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ವಿಭಾಗದ ಸಹಾಯಕ ಎಂಜಿನಿಯರ ರುದ್ರಗೌಡ ಎಂಬಾತನನ್ನು ಸಿಐಡಿ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಮೂಲದ ರುದ್ರಗೌಡ ಎಂಬಾತ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹಿಪ್ಪರಗಿ ಏತ ನೀರಾವರಿ ಯೋಜನೆಯ ಪುನರ್ವಸತಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಇತ್ತೀಚಿಗೆ ಜರುಗಿದ ಎಫ್‌ಡಿಎ ಪರೀಕ್ಷೆಯಲ್ಲಿ ಹಾಲ್ ಟಿಕೆಟ್‌ಗಳ ಅಕ್ರಮದಲ್ಲಿ ಆರೋಪಿಯಾಗಿರುವ ಆರ್‌.ಡಿ.ಪಾಟೀಲ್‌ ಜತೆ ಭಾಗಿಯಾಗಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಿಐಡಿ ಪೊಲೀಸರು ಸಹಾಯಕ ಇಂಜಿನಿಯರ್ ರುದ್ರಗೌಡ ಅವರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ದೃಢವಾಗಿದೆ. ಈ ವಿಚಾರವನ್ನು ಹಿಪ್ಪರಗಿ ಏತ ನೀರಾವರಿ ಯೋಜನೆಯ ಪುನರ್ವಸತಿ ವಿಭಾಗದ ಮುಖ್ಯ ಇಂಜಿನಿಯರ ಮೇಲಾಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.ಎಫ್‌ಡಿಎ ಅಕ್ರಮ ಪರೀಕ್ಷೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಈಗಾಗಲೇ ಎಲ್ಲೆಡೆ ಕಾರ್ಯಾಚರಣೆ ನಡೆಸುತ್ತಿದ್ದು, ಅದರಂತೆ ಹಲವರನ್ನು ಬಂಧಿಸಿದ್ದಾರೆ. ಈ ಪೈಕಿ ರುದ್ರಗೌಡ ಕೂಡ ಒಬ್ಬ. ತನಿಖೆಯಾದ ನಂತರವೇ ಈ ಕುರಿತಾಗಿ ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.