ಭಯ ಮತ್ತು ಕೀಳರಿಮೆ ಆತ್ಮವಿಶ್ವಾಸದ ಶತ್ರುಗಳು. ಅವುಗಳನ್ನು ನಿವಾರಿಸಿಕೊಂಡಲ್ಲಿ ಆತ್ಮವಿಶ್ವಾಸ ಸಹಜವಾಗಿ ಹೆಚ್ಚಲಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸದಾ ಪರಿಶುದ್ಧ ಆಲೋಚನೆ ಮತ್ತು ಕಾರ್ಯಗಳ ಮೂಲಕ ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳುತ್ತಿರಬೇಕು ಎಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಆಳ್ವ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಭಯ ಮತ್ತು ಕೀಳರಿಮೆ ಆತ್ಮವಿಶ್ವಾಸದ ಶತ್ರುಗಳು. ಅವುಗಳನ್ನು ನಿವಾರಿಸಿಕೊಂಡಲ್ಲಿ ಆತ್ಮವಿಶ್ವಾಸ ಸಹಜವಾಗಿ ಹೆಚ್ಚಲಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸದಾ ಪರಿಶುದ್ಧ ಆಲೋಚನೆ ಮತ್ತು ಕಾರ್ಯಗಳ ಮೂಲಕ ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳುತ್ತಿರಬೇಕು ಎಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಆಳ್ವ ತಿಳಿಸಿದರು.

ಶನಿವಾರ ಪಟ್ಟಣದ ಮಂಗಳ ಭವನದಲ್ಲಿ ಉದ್ಯೋಗ ಮೇಳದ ಪೂರ್ವ ಭಾವಿ ಉದ್ಯೋಗ ಮಾಹಿತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸಾಧನೆಗೆ ವಿಫುಲ ಅವಕಾಶಗಳಿದ್ದರೂ ಕೈಹಿಡಿದು ನಂಬಿಕೆಯಿಂದ ಮುನ್ನಡೆಯುವ ಆತ್ಮವಿಶ್ವಾಸದ ಕೊರತೆ ಯುವಪೀಳಿಗೆಯಲ್ಲಿ ಕಾಡುತ್ತಿದೆ. ಈ ದಿಸೆಯಲ್ಲಿ ಪೂರ್ವ ಸಿದ್ಧತಾ ವ್ಯವಸ್ಥೆ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದ ಅವರು, ಇಂದಿನ ವ್ಯವಸ್ಥೆಯಲ್ಲಿ ನಿರುದ್ಯೋಗ ಇದೆ ಎನ್ನುವುದು ತಪ್ಪು. ಕೌಶಲ್ಯಗಳ ಕೊರತೆಯಿಂದ ಉದ್ಯೋಗ ಪಡೆಯಲು ವಿಫಲರಾಗುತ್ತಿದ್ದೇವೆ ಎಂದು ತಿಳಿಸಿದರು.

ಉದ್ಯೋಗ ಆಕಾಂಕ್ಷಿಗಳು ಪೂರ್ವ ಸಿದ್ಧತೆ ಇಲ್ಲದೆ ಉದ್ಯೋಗ ಪಡೆಯಲು ಪ್ರಯತ್ನಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ದೊಡ್ಡ ಹುದ್ದೆ, ಉತ್ತಮ ವೇತನದ ನಿರೀಕ್ಷೆಗೆ ಪೂರ್ವ ಸಿದ್ದತೆ ಅತ್ಯಗತ್ಯವಾಗಿದೆ. ದೊರೆತ ಅವಕಾಶ ಬಳಸಿ ಉನ್ನತ ಸಾಧನೆ ಮಾಡಬಹುದು. ಶಿಕಾರಿಪುರ ಅಗಾಧ ಶಕ್ತಿ ಹೊಂದಿದ್ದು, ಮೇಳದ ಸಂಘಟಕರಾದ ಸಂಸದ ಹಾಗೂ ಶಾಸಕರ ಸಂಕಲ್ಪವನ್ನು ಈಡೇರಿಸಲು ಯುವಪೀಳಿಗೆ ಸುಪ್ತವಾಗಿರುವ ಸಾಮರ್ಥ್ಯ, ಶಕ್ತಿಯನ್ನು ಬಳಸಿ ಉದ್ಯೋಗ ಮೇಳವನ್ನು ಯಶಸ್ವಿಯಾಗಿಸುವಂತೆ ಕರೆ ನೀಡಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ತಾಲೂಕಿನ ಪ್ರತಿಭಾವಂತ ಯುವ ಪ್ರತಿಭೆಗಳಿಗೆ ಉದ್ಯೋಗ ದೊರಕಿಸುವ ಸದುದ್ದೇಶದಿಂದ ಮೇಳ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿರವರ 2047ಕ್ಕೆ ಭಾರತ ವಿಕಸಿತ ದೇಶವಾಗಬೇಕು ಎಂಬ ಸಂಕಲ್ಪ ಕಾರ್ಯಗತವಾಗಲು ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕ ಶಕ್ತಿಯನ್ನು ಹೊಂದಿ ವಿಶ್ವದಲ್ಲಿ ಅಭಿವೃದ್ಧಿ ಹೊಂದಿದ ಪ್ರಥಮ ರಾಷ್ಟ್ರವಾಗಬೇಕು ಎಂದರು.

ಮಾಜಿ ಸಿಎಂ ಯಡಿಯೂರಪ್ಪನವರು ನಾಡಿನ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣಕ್ಕಾಗಿ ದೊಡ್ಡ ಪ್ರಮಾಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ತಾಲೂಕಿನ ಯುವ ಪ್ರತಿಭೆಗಳಿಗೆ ಉದ್ಯೋಗ ವಹಿಸಿಕೊಡಬೇಕು ಎಂಬ ಇಚ್ಛೆಯಂತೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ರಾಮಾನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ ವಸಂತ ಗೌಡ, ಚನ್ನವೀರಪ್ಪ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಪ್ರತಿನಿಧಿ, ಪ್ರಾಚಾರ್ಯ ಡಾ.ಶಿವಕುಮಾರ್, ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ ಸಹಿತ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ತಂಡ, ಕಸಬಾ ಹೋಬಳಿ ಹಾಗೂ ಪಟ್ಟಣದ ಉದ್ಯೋಗ ಮೇಳದ ನೋಂದಾಯಿತ ಉದ್ಯೋಗ ಆಕಾಂಕ್ಷಿಗಳು ಉಪಸ್ಥಿತರಿದ್ದರು.

ಕು.ಸ್ಪೂರ್ತಿ ಪ್ರಾರ್ಥಿಸಿ, ಪ್ರಾಚಾರ್ಯ ವೀರೇಂದ್ರ ಸ್ವಾಗತಿಸಿ, ಕೋಟೋಜಿರಾವ್ ನಿರೂಪಿಸಿ ವಂದಿಸಿದರು.