ರಾ.ಹೆ.ಚತುಷ್ಪಥ ಕಾಮಗಾರಿ: ಉಪ್ಪಿನಂಗಡಿ ಚರಂಡಿ ಅಸ್ತವ್ಯಸ್ತ ಆತಂಕ

| Published : Nov 17 2023, 06:45 PM IST

ರಾ.ಹೆ.ಚತುಷ್ಪಥ ಕಾಮಗಾರಿ: ಉಪ್ಪಿನಂಗಡಿ ಚರಂಡಿ ಅಸ್ತವ್ಯಸ್ತ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ: ಉಪ್ಪಿನಂಗಡಿ ಜನತೆಗೆ ಚರಂಡಿ ಅವ್ಯವಸ್ಥೆಯ ಆತಂಕ, ಮಳೆಗಾಲದಲ್ಲಿ ಕೃತಕ ನೆರೆ ಭೀತಿ

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದಂತೆಯೇ ಉಪ್ಪಿನಂಗಡಿ ಪೇಟೆಯೊಳಗಿನ ಚರಂಡಿ ಅಸ್ತವ್ಯಸ್ತಗೊಳ್ಳುತ್ತಿರುವ ಭೀತಿ ಸ್ಥಳೀಯರನ್ನು ಕಾಡತೊಡಗಿದೆ.

ಹೆದ್ದಾರಿ ಇಲಾಖೆ ಕಾರ್ಯ ಯೋಜನೆ ಅನುಸಾರ ರೂಪಿತವಾದ ಚರಂಡಿ ವ್ಯವಸ್ಥೆಗೂ , ಇಲ್ಲಿ ಪ್ರಸ್ತುತ ಇರುವ ಚರಂಡಿ ವ್ಯವಸ್ಥೆಗೂ ಅಜಗಜಾಂತರವಿದೆ. ಎಲ್ಲವನ್ನೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವೇ ಮಾಡಿಕೊಡುತ್ತದೆ ಎಂಬ ಭಾವನೆ ಹೊಂದಿದ್ದ ಸ್ಥಳೀಯಾಡಳಿತಕ್ಕೇ ಈಗ ಕಳವಳ ಹುಟ್ಟಿಕೊಂಡಿದೆ.

ಕಾಮಗಾರಿ ಪ್ರಾರಂಭಕ್ಕೆ ಮುನ್ನ ಇಲಾಖಾಧಿಕಾರಿಗಳು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಕಾರ್ಯ ಯೋಜನೆ ವಿವರಿಸಿದ್ದು, ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ಕಾಮಗಾರಿ ಪ್ರಾರಂಭಿಸಲಾಗಿತ್ತು.

ಸ್ಥಳೀಯ ಆಡಳಿತದ ನಿರ್ಲಕ್ಷ್ಯವೋ , ಮಾಹಿತಿ ಕೊರತೆಯೋ ಎಂಬಂತೆ ಭೂ ಸ್ವಾಧೀನ ಪಡಿಸಿದ್ದರೂ ಪಟ್ಟಣದ ಮೂಲಭೂತ ಸೌಕರ್ಯವನ್ನು ರಕ್ಷಿಸುವ ಯಾ ಒದಗಿಸುವ ಹೊಣೆಗಾರಿಕೆ ಹೆದ್ದಾರಿ ಇಲಾಖೆಯದ್ದಾಗಿದೆ ಎಂಬ ಭಾವನೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಇತ್ತು. ಚರಂಡಿ ವ್ಯವಸ್ಥೆಗಳ ಬಗ್ಗೆ ಯಾವುದೇ ಗಹನ ಚಿಂತನೆಗೆ ಒಳಗಾಗಿರಲಿಲ್ಲ. ಪರಿಣಾಮ ಇದೀಗ ಉಪ್ಪಿನಂಗಡಿ ಪೇಟೆ ಶಾಶ್ವತ ಸಮಸ್ಯೆಗೆ ತುತ್ತಾಗುವ ಭೀತಿಗೆ ಸಿಲುಕಿದೆ.

ಹೆದ್ದಾರಿ ಇಲಾಖಾಧಿಕಾರಿಗಳ ಪ್ರಕಾರ ಅಗಲೀಕರಣಗೊಂಡ ಹೆದ್ದಾರಿಯಲ್ಲಿ ಪ್ರತ್ಯೇಕ ಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತದೆ. ಅದು ಹೆದ್ದಾರಿಯಲ್ಲಿ ಬಿದ್ದ ಮಳೆ ನೀರು ಹರಿದುಹೋಗಲು ಮಾತ್ರ ಬಳಕೆಯಾಗುತ್ತದೆ. ಈಗ ಪೇಟೆಯಲ್ಲಿರುವ ಚರಂಡಿಗೂ, ಹೆದ್ದಾರಿಯಲ್ಲಿ ಹೊಸದಾಗಿ ನಿರ್ಮಿಸುವ ಚರಂಡಿಗೂ ಏರಿಳಿತದ ಅಂತರವಿದೆ. ಮೇಲ್ಮಟ್ಟದ ಹೆದ್ದಾರಿಯಲ್ಲಿ ನಿರ್ಮಿಸಲಾಗುವ ಚರಂಡಿಯಲ್ಲಿ ಪೇಟೆಯ ನೀರು ಯಾವ ಕಾರಣಕ್ಕೂ ಹರಿಯದು ಮತ್ತು ಪೇಟೆಯ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಹೊಣೆಗಾರಿಕೆ ಸ್ಥಳೀಯಾಡಳಿತದ್ದಾಗಿರುವುದರಿಂದ ಹೆದ್ದಾರಿ ಇಲಾಖೆ ಇದರ ಬಗ್ಗೆ ತಲೆ ಕೆಡಿಸಿಲ್ಲ ಎನ್ನಲಾಗಿದೆ.

ಳೀಯರ ಒತ್ತಡದಿಂದ ಈಗಾಗಲೇ ಕೆಲವೆಡೆ ಚರಂಡಿ ನಿರ್ಮಿಸಲಾಗಿದ್ದರೂ ಅದರಲ್ಲಿ ನೀರು ಹರಿಯಬೇಕಾದರೆ ಉಪ್ಪಿನಂಗಡಿಯಲ್ಲಿ ನೆರೆ ನೀರು ಸಂಗ್ರಹಗೊಳ್ಳುವಂತ ಸ್ಥಿತಿ ನಿರ್ಮಾಣಗೊಳ್ಳಬೇಕು. ಆ ರೀತಿಯಲ್ಲಿ ಈಗ ನೀರು ಹರಿಯುವ ಮಟ್ಟಕಿಂತ ಎತ್ತರವಾಗಿ ಚರಂಡಿ ನಿರ್ಮಿಸಲಾಗಿದೆ. ಇದರ ಪರಿಣಾಮದಿಂದಾಗಿ ಕಳೆದ ಕೆಲ ದಿನಗಳಲ್ಲಿ ಸತತ ಸುರಿದ ಭಾರೀ ಮಳೆಗೆ ಚರಂಡಿಯಲ್ಲಿ ನೀರು ಹರಿಯದೇ ಕೃತಕ ನೆರೆ ಉದ್ಭವಿಸಿ ಹಲವು ಮಂದಿ ಸಂಕಷ್ಠಕ್ಕೆ ತುತ್ತಾಗಿದ್ದರು. ಇದೇ ಪರಿಸ್ಥಿತಿ ನಿರಂತರ ಮುಂದುವರಿದರೆ ಉಪ್ಪಿನಂಗಡಿ ಪೇಟೆ ಮಳೆಗಾಲದಲ್ಲಿ ಪದೇ ಪದೇ ಕೃತಕ ನೆರೆಗೆ ಸಿಲುಕುವ ಸಾಧ್ಯತೆ ಇದೆ.