ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರುತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿರುವ ಸಂಡೂರಿಗರ ಆರಾಧ್ಯ ದೈವ ಶ್ರೀಕುಮಾರಸ್ವಾಮಿ ದೇವಸ್ಥಾನದಿಂದ ಸುಮಾರು ೧೫೦-೨೦೦ ಮೀ ದೂರದಲ್ಲಿರುವ ಶ್ರೀಕುಮಾರಸ್ವಾಮಿ ಪಾದಗಟ್ಟೆಯ ಅಡಿಯಲ್ಲಿನ ಮಣ್ಣಿನ ದಿಬ್ಬ ಸಡಿಲವಾಗಿ, ಮಣ್ಣು ಸವಕಳಿಯಾಗುತ್ತಿರುವ ಹಿನ್ನೆಲೆ ಪಾದಗಟ್ಟೆಗೆ ಕುಸಿಯುವ ಭೀತಿ ಎದುರಾಗಿದೆ. ಶ್ರಾವಣ ಸೋಮವಾರದಂದು ಶ್ರೀಕುಮಾರಸ್ವಾಮಿ ದರ್ಶನಕ್ಕೆ ತೆರಳಿದ್ದ ಪರಿಸರವಾದಿ ಟಿ.ಎಂ. ಶಿವಕುಮಾರ್ ಶ್ರೀಕುಮಾರಸ್ವಾಮಿ ಪಾದಗಟ್ಟೆಯ ಅಡಿಯಲ್ಲಿನ ಮಣ್ಣು ಕುಸಿಯುತ್ತಿರುವುದನ್ನು ಗಮನಿಸಿ, ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀಕುಮಾರಸ್ವಾಮಿ ದೇವಸ್ಥಾನದ ಸನಿಹದಲ್ಲಿಯೇ ಗಣಿಗಾರಿಕೆ ನಡೆಯುತ್ತಿರುವುದು, ಪಾದಗಟ್ಟೆಯ ಸನಿಹದಿಂದಲೇ ಅದಿರು ಸಾಗಣೆ ಲಾರಿಗಳು ಸಾಗುವುದರಿಂದ, ಪಾದಗಟ್ಟೆಯ ಸುತ್ತಲಿನ ಮಣ್ಣು ಕುಸಿದಿರಬಹುದು. ಪಾದಗಟ್ಟೆಯ ಕೆಳಗಿನ ಮಣ್ಣು ಇನ್ನೊಂದಿಷ್ಟು ಕುಸಿದರೆ, ಪಾದಗಟ್ಟೆಯೇ ಕುಸಿಯುವ ಸಂಭವವಿದೆ. ಪಾದಗಟ್ಟೆಯ ಸಂರಕ್ಷಣೆಗೆ ಪುರಾತತ್ವ ಇಲಾಖೆ ಅಧಿಕಾರಿಗಳು, ದೇವಸ್ಥಾನದ ಉಸ್ತುವಾರಿ ವಹಿಸಿಕೊಂಡಿರುವವರು ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.
ಹಾಗೆಯೇ ಶ್ರೀಕುಮಾರಸ್ವಾಮಿ ದೇವಸ್ಥಾನದ ಹತ್ತಿರದ ಬಸ್‌ಸ್ಟಾಪ್ ಬಳಿಯಲ್ಲಿ ಲಾರಿಯೊಂದು ಉರುಳಿ ಬಿದ್ದಿರುವುದನ್ನು ಗಮನಿಸಿ, ಇಲ್ಲಿ ಜನತೆ ಬಸ್‌ಗಾಗಿ ಕಾದು ನಿಲ್ಲುತ್ತಾರೆ. ಅಂತಹ ಸಂದರ್ಭದಲ್ಲಿ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದರೆ, ಜನರ ಗತಿ ಏನು? ದೇವಸ್ಥಾನದ ಮಾರ್ಗದಲ್ಲಿ ಪ್ರಯಾಣಿಕರು ಹಾಗೂ ಪಾದಾಚಾರಿಗಳ ಸುರಕ್ಷತೆಗೆ ಮತ್ತು ವಾಹನಗಳ ಅತಿವೇಗದ ಚಾಲನೆಯನ್ನು ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.;Resize=(128,128))
;Resize=(128,128))
;Resize=(128,128))