35 ವರ್ಷದ ಜೆಡಿಎಸ್‌ನ ನಂಟಿಗೆ ಗುಡ್ ಬೈ ಹೇಳಿದ ಮುಖಂಡ

| Published : Apr 18 2024, 02:25 AM IST / Updated: Apr 18 2024, 01:03 PM IST

ಸಾರಾಂಶ

ಅವರು ಏನಾದರೂ ಮಾಡಿ ನಮ್ಮ ನಾಯಕರನ್ನು ಕುಗ್ಗಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳು ಯಾವುದೂ ಯಶಸ್ಸಾಗುವುದಿಲ್ಲ. ಐಟಿ, ಇಡಿ, ಸಿಬಿಐ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.

 ರಾಮನಗರ :  ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿ ಐಟಿ, ಇಡಿ ಹಾಗೂ ಸಿಬಿಐ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಉಪಯೋಗಿಸುತ್ತಿದೆ. ಈ ಪ್ರಯೋಗಗಳು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದು, ನಮಗಿದು ಹೊಸತಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಕಿಡಿಕಾರಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಬಳಿ ಇರುವ ಅಸ್ತ್ರ ಅದೊಂದೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಐಟಿ, ಇಡಿ, ಸಿಬಿಐ ಬಿಟ್ಟು ಅವರಿಗೆ ಬೇರೆ ಗೊತ್ತಿಲ್ಲ. ಪ್ರಧಾನಮಂತ್ರಿಗಳಿಗೆ, ಬಿಜೆಪಿ ನಾಯಕರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಲು ಹೇಳಿ. 10 ವರ್ಷಗಳ ಹಿಂದೆ ಅವರು ನೀಡಿರುವ ಹೇಳಿಕೆ, ಕೊಟ್ಟಿರುವ ವಚನಗಳ ಬಗ್ಗೆ ಇಂದು ಅವರು ಏನು ಹೇಳುತ್ತಾರೆ ಕೇಳಿ. ಅವರಿಂದ ಶ್ರೀರಾಮನವಮಿ ದಿನ ಈ ವಿಚಾರವಾಗಿ ಸತ್ಯ ಹೇಳಿಸಿ ಎಂದರು.

ಅವರು ಏನಾದರೂ ಮಾಡಿ ನಮ್ಮ ನಾಯಕರನ್ನು ಕುಗ್ಗಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳು ಯಾವುದೂ ಯಶಸ್ಸಾಗುವುದಿಲ್ಲ. ಐಟಿ, ಇಡಿ, ಸಿಬಿಐ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷ ಕಟ್ಟಿಹಾಕಿ ಸೋಲಿಸಲು ಬಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಕೇಜ್ರಿವಾಲ್ ಅವರು ಪ್ರತಿ ಹಂತದಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಾ ದೆಹಲಿ ಹಾಗೂ ಪಂಜಾಬ್ ನಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿ ಉತ್ತಮ ಆಡಳಿತ ನೀಡಿ ಜನಮನ್ನಣೆ ಗಳಿಸಿದ್ದಾರೆ. ಅವರು ಎಲ್ಲಿ ತಮ್ಮ ಪ್ರಾಬಲ್ಯ ವಿಸ್ತರಿಸುತ್ತಾರೋ ಎಂಬ ಕಾರಣಕ್ಕೆ ಅವರ ವಿರುದ್ಧ ಇಡಿ, ಸಿಬಿಐ ತನಿಖಾ ಸಂಸ್ಥೆಗಳ ಮೂಲಕ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ದಾರೆ ಎಂದು ಆರೋಪಿಸಿದರು.

ರಾಮನಗರದ ಜೆಡಿಎಸ್ ಮುಖಂಡರಾದ ರಾಜಶೇಖರ್ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ನಮ್ಮ ಪಕ್ಷ ಸೇರಿದ್ದು, ಅವರನ್ನು ಸ್ವಾಗತಿಸುತ್ತೇನೆ. ಈ ಜಿಲ್ಲೆಯ ಅಭಿವೃದ್ಧಿ ಹಾಗೂ ತಾಲೂಕಿನ ಅಭಿವೃದ್ಧಿಗೆ, ನಿಮ್ಮ ನಾಯಕತ್ವದ ಗುಣಗಳು ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಹೀಗಾಗಿ ನಿಮ್ಮ ನಾಯಕತ್ವ ಗುಣ ಉಳಿಸಿಕೊಳ್ಳಲು ನಮ್ಮ ಜತೆ ಕೈ ಜೋಡಿಸಿ ಎಂದು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ನಾನು ನಿಮ್ಮ ಸಹೋದರರಾಗಿ ನಿಮ್ಮ ಶಕ್ತಿ ಗುರುತಿಸಿ ಈ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ನೀವೆಲ್ಲರೂ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಸಮಾನ ಮನಸ್ಕರಿಗೆ ಈ ಮೂಲಕ ಮುಕ್ತ ಆಹ್ವಾನ ನೀಡುತ್ತೇನೆ ಎಂದು ಡಿ.ಕೆ.ಸುರೇಶ್ ಹೇಳಿದರು.

ನೋವಾಗಿ, ಜೆಡಿಎಸ್ ತೊರೆದಿದ್ದೇನೆ:  ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ರಾಜಶೇಖರ್ ಮಾತನಾಡಿ, 35 ವರ್ಷ ನಾನು ಜೆಡಿಎಸ್‌ನಲ್ಲಿದ್ದೆ. ಕೆಲವು ವಿಚಾರಗಳಲ್ಲಿ ನೋವಾಯಿತು. ಹೀಗಾಗಿ ಜೆಡಿಎಸ್ ತೊರೆದಿದ್ದೇನೆ. ಕಾಂಗ್ರೆಸ್ ನಾಯಕರು ತಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು. ನಮ್ಮ ತಂದೆಯವರು ಮೂಲತಃ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ವೇಳೆ ಸುರೇಶ್ ಅವರೊಂದಿಗೆ ಕ್ಷೇತ್ರ ಸುತ್ತಾಡಿ ಕೆಲಸ ಮಾಡಿದ್ದೇನೆ. ತಡರಾತ್ರಿಯಾದರೂ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸುರೇಶ್ ಗೆಲುವಿಗೆ ನಿಷ್ಠೆಯಿಂದ ಶ್ರಮಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಮಾಜಿ ಶಾಸಕ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಮುಖಂಡರಾದ ಪ್ರಸನ್ನ ಕುಮಾರ್, ಪುಟ್ಟರಾಜು ಇತರರಿದ್ದರು.

ರಾಜಕೀಯಕ್ಕಾಗಿ ರಾಮನ ಜಪ: ಸುರೇಶ್

ನಾವು ರಾಮನನ್ನು ನಮ್ಮ ಊರಿನಲ್ಲೇ ನೋಡುತ್ತಿದ್ದೇವೆ. ಅಯೋಧ್ಯೇಗೆ ಏಕೆ ಹೋಗಬೇಕು? ನಮ್ಮೂರು, ತಾಲೂಕಿನಲ್ಲಿ ದೇವಾಲಯ ಕಟ್ಟಿ ಅಲ್ಲೇ ಪೂಜಿಸುತ್ತೇವೆ. ನೀವು ರಾಜಕೀಯಕ್ಕಾಗಿ ರಾಮನ ಹೆಸರು ಜಪ ಮಾಡುತ್ತಿದ್ದೀರಿ. ನಿಮಗೆ ರಾಮ ಎಂದರೆ ನನಗೆ ಹನುಮಂತ, ವೆಂಕಟರಮಣಸ್ವಾಮಿ, ಕೆಂಕೇರಮ್ಮ, ಕಬ್ಬಾಳಮ್ಮ, ತಾಯಿ ಚಾಮುಂಡಿ. ನೀವು ರಾಜಕೀಯಕ್ಕೋಸ್ಕರ ರಾಮನ ಹೆಸರು ಹೇಳುತ್ತಿದ್ದೀರಿ. ನಿಮ್ಮ ಉದ್ದೇಶ ರಾಜಕೀಯವೇ ಹೊರತು, ಆತನ ಕೃಪೆಗಾಗಿ ಅಲ್ಲ. ಬಿಜೆಪಿಯ ಈ ಸುಳ್ಳನ್ನು ಮಾಧ್ಯಮಗಳು ಪ್ರಚಾರ ಮಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಟಾಂಗ್ ನೀಡಿದರು.

ಅರಣ್ಯ ಇಲಾಖೆಗೆ ಅರ್ಜಿ ಹಾಕಿದ್ದಾರಾ? :

ರಾಮದೇವರ ಬೆಟ್ಟವನ್ನು ನಾವೇ ಅಭಿವೃದ್ಧಿ ಮಾಡುತ್ತೇವೆ ಎಂಬ ಬಿಜೆಪಿಯ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಯಾವಾಗ ಅಭಿವೃದ್ಧಿ ಮಾಡುತ್ತಾರೆ? ಅವರು ನಾಲ್ಕು ವರ್ಷ ಇದೇ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದರಲ್ಲವೇ? ಜಿಲ್ಲೆಯಲ್ಲಿ ಕಸ ಗುಡಿಸಿ ಕ್ಲೀನ್ ಮಾಡುತ್ತೇನೆ ಎಂದಿದ್ದರು. ಕ್ಲೀನ್ ಮಾಡಿದರಾ? ರಾಮ ದೇವರ ಬೆಟ್ಟದ ಅಭಿವೃದ್ಧಿಗೆ ಬಜೆಟ್ ನಲ್ಲಿ ಎಷ್ಟು ಅನುದಾನ ಇಟ್ಟಿದ್ದಾರೆ? ಎಷ್ಟು ಬಿಡುಗಡೆ ಮಾಡಿದ್ದಾರೆ? ರಣಹದ್ದು ಸಂರಕ್ಷಣಾ ಇಲಾಖೆ ಅನುಮತಿ ಪಡೆದಿದ್ದಾರಾ? ಚುನಾವಣೆಗಾಗಿ ಇಂದು ಬೆಟ್ಟ ಹತ್ತಿದ್ದಾರೆ. ಇದು ಚುನಾವಣಾ ತಂತ್ರವಲ್ಲದೆ ಮತ್ತೇನು ಎಂದು ಟೀಕಿಸಿದರು.

ರಾಮ ನಮ್ಮೂರಿನಲ್ಲೂ ಇದ್ದಾನೆ. ನಾವೂ ದೇವಾಲಯ ಕಟ್ಟಿದ್ದೇವೆ, ಪೂಜೆ ಮಾಡುತ್ತಿದ್ದೇವೆ. ನಮ್ಮವರೂ ರಸ್ತೆಯಲ್ಲಿ ಪಾನಕ, ಮಜ್ಜಿಗೆ ಹಂಚುತ್ತಿದ್ದಾರೆ. ಬಿಜೆಪಿ ಬಾವುಟ, ಕೇಸರಿ ಶಾಲು ಹಾಕಿಕೊಂಡು ರಾಮನ ಬೆಟ್ಟಕ್ಕೆ ಹತ್ತಿದರೆ ರಾಮನ ಭಕ್ತರಾಗುವುದಿಲ್ಲ. ಅವರು ಚುನಾವಣೆಗೆ ಮಾತ್ರ ರಾಮನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ರಾಮದೇವರ ಬೆಟ್ಟದಲ್ಲಿ ದೇವಾಲಯ ಕಟ್ಟಿ ಎಂದು ನಾನು ಕೇಳುತ್ತಿಲ್ಲ. ಆ ಜಾಗದ ಅಭಿವೃದ್ಧಿಗೆ ರಣಹದ್ದು ಸಂರಕ್ಷಣಾ ಇಲಾಖೆಯ ಅನುಮತಿ ಪಡೆಯಲು ಅರ್ಜಿ ಹಾಕಿದ್ದಾರಾ? ಹಾಕಿದ್ದರೆ ಆ ಅರ್ಜಿಯನ್ನು ತೋರಿಸಲಿ ಸಾಕು. ಡಿಪಿಆರ್ ಮಾಡುವ ಮುನ್ನ ಅನುಮತಿ ಬೇಕಲ್ಲವೇ? ಚುನಾವಣೆ ಸಮಯದಲ್ಲಿ ಅನುಮತಿ ಸಿಗುತ್ತದಾ? ರಾಮದೇವರ ಬೆಟ್ಟಕ್ಕೆ ಅವರೊಬ್ಬರೇ ಅಲ್ಲ, ರಾಮನ ನೋಡಲು, ಪೂಜಿಸಲು ಸಾವಿರಾರು ಮಂದಿ ಹೋಗುತ್ತಿದ್ದಾರೆ ಎಂದು ಸುರೇಶ್ ಹೇಳಿದರು.

 ‘ಇಂದು ಶ್ರೀರಾಮನವಮಿ. ನಾವೆಲ್ಲರೂ ರಾಮನವಮಿ ಆಚರಿಸುತ್ತಿದ್ದೇವೆ. ರಾಮ ಕೇವಲ ಬಿಜೆಪಿಯ ಸ್ವತ್ತಲ್ಲ. ನಾವು ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಎಲ್ಲಾ ದೇವರನ್ನು ಪೂಜಿಸುತ್ತೇವೆ. ನಾವು ರಾಜಕೀಯಕ್ಕಾಗಿ ದೇವರನ್ನು ಬಳಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಆಮ್ ಆದ್ಮಿ ಪಕ್ಷ ನಮ್ಮ ಜತೆ ಕೈ ಜೋಡಿಸಿದ್ದಾರೆ. ಈ ಬಾರಿ ದೇಶದಲ್ಲಿ ಇಂಡಿಯಾ ಒಕ್ಕೂಟ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.’

-ಡಿ.ಕೆ.ಸುರೇಶ್ , ಕಾಂಗ್ರೆಸ್ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ