ಸಾಂಕ್ರಾಮಿಕ ರೋಗ ಭೀತಿ; ಅಗತ್ಯ ಕ್ರಮವಹಿಸಲು ಸೂಚನೆ

| Published : May 01 2024, 01:30 AM IST

ಸಾಂಕ್ರಾಮಿಕ ರೋಗ ಭೀತಿ; ಅಗತ್ಯ ಕ್ರಮವಹಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಕಾಲದಲ್ಲಿ ಹಬ್ಬಗಳ ಆಚರಣೆ ಸಂದರ್ಭ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಮತ್ತು ಹರಡುವ ಸಾಧ್ಯತೆಗಳು ಅಧಿಕವಾಗಿದೆ. ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳದಂತೆ ಅಗತ್ಯ ಕ್ರಮ ವಹಿಸಲು ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬೇಸಿಗೆ ಕಾಲವಾಗಿರುವುದರಿಂದ, ಜಿಲ್ಲೆಯ ಹಳ್ಳಿ, ಪಟ್ಟಣಗಳಲ್ಲಿ ಜಾತ್ರೆ, ರಥೋತ್ಸವ, ಮದುವೆ ಸಮಾರಂಭಗಳು, ದರ್ಗಾಗಳಲ್ಲಿ ಉರೂಸ್‌ಗಳು ಮತ್ತು ಊರು ಹಬ್ಬಗಳ ಆಚರಣೆಯಿರುತ್ತದೆ. ಇಂತಹ ಆಚರಣೆಯ ಸಂದರ್ಭದಲ್ಲಿ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳುಬೇನೆ, ಕಾಲಾರಾ, ವಿಷಮಶೀತ ಜ್ವರ, ಕಾಮಾಲೆ(ಜಾಂಡೀಸ್) ಮತ್ತಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಮತ್ತು ಹರಡುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಈ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳದಂತೆ ಅಗತ್ಯ ಕ್ರಮವಹಿಸಲು ಎಲ್ಲ ಇಲಾಖೆಗಳಿಗೆ ಸೂಚಿಸಿದೆ.

ಮದುವೆ ಸಮಾರಂಭಗಳು, ಜಾತ್ರೆ, ಊರ ಹಬ್ಬ ಮತ್ತಿತರ ಸಾಮಾಜಿಕ ಉತ್ಸವಗಳ ಸಂದರ್ಭಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ವಿಶೇಷ ಎಚ್ಚರಿಕೆ ವಹಿಸುವುದು ಹಾಗೂ ಹೋಟಲ್‌ಗಳಲ್ಲಿ ಸಾರ್ವಜನಿಕರಿಗೆ ಶುದ್ಧವಾದ ಬಿಸಿ ಆಹಾರ ಮತ್ತು ಕುಡಿಯಲು ಬಿಸಿ ನೀರನ್ನು ಉಪಯೋಗಿಸುವಂತೆ ಮತ್ತು ಹೋಟೆಲ್‌ಗಳಲ್ಲಿನ ಘನ ತ್ಯಾಜ್ಯ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು.

ಸಂಬಂಧಪಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಮೂಲಗಳ ಮಾಹಿತಿ ಕಲೆ ಹಾಕಿ, ಎಲ್ಲ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವುದು ಮತ್ತು ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮವಹಿಸುವುದು.

ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಪರೀಕ್ಷೆ ನಡೆಸಿದ ನೀರಿನ ಮೂಲಗಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಯೋಗಶಾಲೆಯಲ್ಲಿ ನಿರ್ವಹಣೆ ಮಾಡುವುದು. ಕುಡಿಯಲು ಯೋಗ್ಯವಲ್ಲವೆಂದು ಧೃಢಪಟ್ಟ ನೀರಿನ ಮೂಲಗಳನ್ನು ಕೂಡಲೇ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಕ್ರಮವಹಿಸುವುದು.

ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿದ್ದರೆ ತಕ್ಷಣ ಸಂಬಂಧಪಟ್ಟ ನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವುದು ಮತ್ತು ವಾಟರ್ ಮ್ಯಾನ್‌ರವರಿಗೆ ಕ್ಲೋರಿನೇಷನ್ ಮಾರ್ಗಸೂಚಿಯನ್ನು ಆರೋಗ್ಯ ಇಲಾಖಾ ವತಿಯಿಂದ ನೀಡುವುದು.

ಜಾತ್ರೆ, ಊರುಸ್ ಹಾಗೂ ಸಾಮಾಜಿಕ ಉತ್ಸವಗಳ ಸಂದರ್ಭಗಳಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಮಾಹಿತಿ, ವಸ್ತು ಮಾಹಿತಿ, ಶಿಕ್ಷಣ ಸಂವಹನ ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಿಗೆ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣ ನೀಡುವುದು. ನಿರ್ದಿಷ್ಟವಾದ ರೋಗ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗದಂತೆ ಜಾಗ್ರತೆವಹಿಸಿ, ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.