ಶ್ರೀರಾಮುಲುಗೆ ಗ್ಯಾರಂಟಿ ಯೋಜನೆಯ ಭಯ

| Published : Apr 17 2024, 01:21 AM IST

ಸಾರಾಂಶ

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿಯ 18,77,751 ಮತದಾರರ ಪೈಕಿ 9,51,522 ಮಹಿಳಾ ಮತದಾರರಿದ್ದಾರೆ.

ಕೆ.ಎಂ.ಮಂಜುನಾಥ್

ಬಳ್ಳಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆಯಲ್ಲಿ ಗೆದ್ದು ಬರುವೆ ಎಂದುಕೊಂಡಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಭಯ ಹುಟ್ಟಿಸಿವೆ!

ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾಂಗ್ರೆಸ್‌ ಗ್ಯಾರಂಟಿಯೇ ಕಾರಣ ಎಂದು ಬಹಿರಂಗವಾಗಿ ಹೇಳುತ್ತಿರುವ ಶ್ರೀರಾಮುಲು, ಈಗಲೂ ಗ್ಯಾರಂಟಿ ಫಲಾನುಭವಿ ಮಹಿಳೆಯರು ಕೈಕೊಟ್ಟರೆ ಏನುಗತಿ ಎಂದು ಚಿಂತಿತರಾಗಿದ್ದಾರೆ ಎಂದು ತಮ್ಮ ಆಪ್ತರ ಬಳಿ ಮಾತನಾಡಿಕೊಳ್ಳುತ್ತಿದ್ದಾರಂತೆ. ಇದೀಗ ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿಯ 18,77,751 ಮತದಾರರ ಪೈಕಿ 9,51,522 ಮಹಿಳಾ ಮತದಾರರಿದ್ದಾರೆ. ಅಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಹಕ್ಕು ಚಲಾಯಿಸಲಿದ್ದಾರೆ. ಬಿಜೆಪಿಗೂ ತಿಳಿದಿರುವಂತೆ ಜಿಲ್ಲೆಯ ಭಾಗಶಃ ಮಹಿಳೆಯರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು. ಮಹಿಳಾ ಮತಗಳು ಬಿಜೆಪಿಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚು ಎಂದೇ ವಿಶ್ಲೇಷಿಸಲಾಗುತ್ತಿದೆ.

ಇನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ನತ್ತ ವಾಲುವ ಸಾಧ್ಯತೆ ಇದೆ. ಒಂದೆಡೆ ದೊಡ್ಡ ಸಂಖ್ಯೆಯ ಮಹಿಳಾ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ, ಇನ್ನೊಂದೆಡೆ ಅಖಂಡ ಜಿಲ್ಲೆಯ ಮತಗಳ ಅರ್ಧದಷ್ಟಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳು, ಕಮಲ ಅಭ್ಯರ್ಥಿಗೆ ತಿರುಗೇಟು ನೀಡುವ ಆತಂಕವೂ ಎದುರಾಗಿದೆ. ಈ ಲೆಕ್ಕಾಚಾರ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ತಂದರೂ ಅಚ್ಚರಿಯಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲುಗೆ ಸೋಲಿಣಿಸಿದ ಕಾರಣಕ್ಕೆ ಸಚಿವ ಸ್ಥಾನ ದಕ್ಕಿಸಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ.

ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ, ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರು, " ಬಳ್ಳಾರಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲೇಬೇಕು " ಎಂದು ಜಿಲ್ಲಾ ಸಚಿವ ಹಾಗೂ ಕಾಂಗ್ರೆಸ್ ಶಾಸಕರಿಗೆ ಕಟ್ಟಪ್ಪಣೆ ನೀಡಿದ್ದು, ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ಸಿಗುವ ಲೀಡ್ ಮೇಲೆಯೇ ಮುಂದಿನ ದಿನಗಳಲ್ಲಿ ಕ್ಷೇತ್ರಗಳ ಅಭಿವೃದ್ಧಿ ನಿಂತಿದೆ. ಸಿಎಂ ಅಥವಾ ಡಿಸಿಎಂ ಭೇಟಿ ಮಾಡಿ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸಲು ಈ ಚುನಾವಣೆಯಲ್ಲಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಮತ ಶಕ್ತಿ ಸಾಬೀತುಪಡಿಸಬೇಕಾಗಿದೆ. ಕಾಂಗ್ರೆಸ್ ಶಾಸಕರು ಶತಾಯಗತಾಯ ತಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಬಗ್ಗೆ ಜಿಲ್ಲೆಯ ಮತದಾರರಲ್ಲಿ ಸಕಾರಾತ್ಮಕ ಅಭಿಪ್ರಾಯವಿದೆ. ನಾಲ್ಕು ಬಾರಿ ಶಾಸಕನಾಗಿದ್ದರೂ ಸಾರ್ವಜನಿಕರ ಜೊತೆ ಉತ್ತಮ ಸಂಬಂಧ, ಜನರ ಜೊತೆಗೆ ನಡೆದುಕೊಳ್ಳುವ ರೀತಿ ಹಾಗೂ ಯಾರೇ ಭೇಟಿ ಮಾಡಿದರೂ ಸ್ಪಂದಿಸುವ ಗುಣವನ್ನು ಸಾರ್ವಜನಿಕರು ಕೊಂಡಾಡುತ್ತಿದ್ದಾರೆ. ಜನಸ್ಪಂದನ ಗುಣದ ಅಭ್ಯರ್ಥಿಯ ಆಯ್ಕೆ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸಿದರೂ ಅಚ್ಚರಿಯಿಲ್ಲ.

ಕಾಂಗ್ರೆಸ್ ಗೆದ್ದು ಬಂದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇದು ಜಿಲ್ಲೆಯ ಪ್ರಜ್ಞಾವಂತ ಮತದಾರರಿಗೂ ಗೊತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ ಎನ್ನುತ್ತಾರೆ ಬಳ್ಳಾರಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್.