ಸಾರಾಂಶ
ಗೋಕರ್ಣ: ಕಳೆದ ಮಳೆಗಾಲದಲ್ಲಿ ಈ ಭಾಗದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ರಾಶಿ ಬಿದ್ದ ಮಣ್ಣು ಹಾಗೂ ಮತ್ತೆ ಕುಸಿಯದಂತೆ ತಡೆಯುವ ಯೋಜನೆಯನ್ನು ಇದುವರೆಗೆ ಸಂಬಂಧಿಸಿದ ಇಲಾಖೆ ರೂಪಿಸದೇ ನಿರ್ಲಕ್ಷ್ಯ ವಹಿಸಿದೆ.
ಇನ್ನು ಕೆಲವೇ ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭಗೊಳ್ಳಲಿದ್ದು, ಮತ್ತೇನಾದರೂ ದುರಂತ ನಡೆದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಕಳೆದ ಜುಲೈ ತಿಂಗಳಲ್ಲಿ ಭಾರಿ ಮಳೆಯ ಪರಿಣಾಮ ಇಲ್ಲಿನ ಮುಖ್ಯ ಕಡಲತೀರದ ಬಳಿ ಇರುವ ಶ್ರೀರಾಮ ಮಂದಿರದ ಪಕ್ಕದಲ್ಲಿನ ಬೃಹತ್ ಪರ್ವತ ಕುಸಿದಿತ್ತು. ಕೂದಲೆಳೆಯ ಅಂತರದಲ್ಲಿ ಮಂದಿರಕ್ಕೆ ಹಾನಿ ತಪ್ಪಿತ್ತು. ಆದರೆ ಶುದ್ಧ ಝರಿ ನೀರು ಬರುವ ಸ್ಥಳ ಮಂದಿರದ ಚಾವಣಿ ನಜ್ಜು ಗುಜ್ಜಾಗಿತ್ತು.
ಮಣ್ಣಿನ ರಾಶಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆ ಹಾಗೂ ಮುಚ್ಚಿದ ನೀರಿನ ಝರಿಯನ್ನು ಶಾಂಡಿಲ್ಯ ಮಹಾರಾಜರ ಶಿಷ್ಯರು ಹಾಗೂ ಸ್ಥಳೀಯರು ಅಲ್ಪ ಪ್ರಮಾಣದಲ್ಲಿ ತೆಗೆದು ಸ್ವಚ್ಛಗೊಳಿಸಿದ್ದಾರೆ.ಪ್ರಸ್ತುತ ಬೃಹತ್ ಬಂಡೆ ಗುಡ್ಡದ ತುದಿಯಲ್ಲಿ ಬೀಳುವ ಹಂತದಲ್ಲಿದ್ದು, ಮಣ್ಣಿನ ರಾಶಿ ಹಾಗೆ ಬಿದ್ದಿದೆ. ಇದನ್ನು ತೆರವುಗೊಳಿಸುವುದು ಅಥವಾ ಇದಕ್ಕೆ ಪಿಚ್ಚಿಂಗ್ ಮತ್ತಿತರ ವೈಜ್ಞಾನಿಕ ಕ್ರಮದಿಂದ ಮತ್ತೆ ಕುಸಿಯದಂತೆ ತಡೆಯಲು ಪ್ರಯತ್ನಿಸುವುದು ಹಾಗೂ ಬಂಡೆ ಮಂದಿರದ ಮೇಲೆ ಬೀಳದಂತೆ ತಡೆಯಲು ಅಥವಾ ತೆರವುಗೊಳಿಸಲು ಸರ್ಕಾರದಿಂದ ಹಣ ಮಂಜೂರಿಗೊಳಿಸಬೇಕಿದೆ. ಇಲ್ಲವಾದರೆ ಮತ್ತೆ ಅವಘಡ ಸಂಭವಿಸುವ ಆತಂಕವಿದೆ.
ಇದರಂತೆ ಇಲ್ಲಿ ಮೇಲನಕೇರಿಯಿಂದ ಪ್ರವಾಸಿ ಮಂದಿರಕ್ಕೆ ತೆರಳುವ ಮಾರ್ಗದ ಪಕ್ಕದಲ್ಲಿ ಗುಡ್ಡ ಕುಸಿದು ಮಣ್ಣಿನ ರಾಶಿ ಹಾಗೇ ಬಿದ್ದಿದೆ. ಇಲ್ಲಿಯೂ ಮತ್ತೆ ಭೂಕುಸಿತ ಉಂಟಾದರೆ ರಸ್ತೆ ಸಂಪರ್ಕವೇ ಕಡಿತಕೊಳ್ಳಬಹುದಾಗಿದೆ.ಮೂಡಂಗಿ ಸರ್ಕಾರಿ ಶಾಲೆಯ ಬಳಿ ಸಹ ಗುಡ್ಡ ಕುಸಿದು ಬೃಹತ್ ಬಂಡೆ ಶಾಲೆಯ ಆವಾರದಲ್ಲಿ ಉರುಳಿ ಬಂದಿತ್ತು. ಇಲ್ಲಿಯೂ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ತಾರಮಕ್ಕು ಮುಖ್ಯ ರಸ್ತೆ ಬಳಿ ಸಹ ಧರೆ ಅರೆಬರೆ ಕುಸಿದು ನಿಂತಿದ್ದು, ಈ ಭಾಗದಲ್ಲಿ ಪಚ್ಚಿಂಗ್ ಮಾಡುವ ಮೂಲಕ ಮತ್ತಷ್ಟು ಕುಸಿತ ತಡೆಯಬಹುದಾಗಿದೆ.
ವರದಿ ಹೋಗಿದೆ ಕ್ರಮವಿಲ್ಲ:ಪೃಕೃತಿ ವಿಕೋಪ, ಅವಘಡದಲ್ಲಿ ನಡೆದ ಈ ಅವಾಂತರದ ವಿವರವನ್ನು ಕಂದಾಯ ಇಲಾಖೆ ಅಧಿಕಾರಿಗಳು ಅದೇ ಸಮಯದಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮಳೆಗಾಲ ಕಳೆದು ಆರೇಳು ತಿಂಗಳ ಕಳೆದರೂ ಯಾವುದೇ ಕ್ರಮ ಜರುಗಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮಕ್ಕೆ ಕಡಿವಾಣವೂ ಇಲ್ಲ:ಇನ್ನು ಪರ್ವತದ ಮೇಲ್ಭಾಗದಲ್ಲಿ ಚಿರೆಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಪರಿಣಾಮ ಬೃಹತ್ ಕೆರೆಗಳು ನಿರ್ಮಾಣವಾಗಿದ್ದು, ಇದರಿಂದ ಗುಡ್ಡ ಕುಸಿತ ಸಂಭವಿಸುತ್ತದೆ ಎನ್ನಲಾಗಿದೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜತೆಗೆ ಎಲ್ಲೆಂದರಲ್ಲಿ ಗುಡ್ಡ ಕಡಿದು ಸಮತಟ್ಟು ಮಾಡಲಾಗುತ್ತಿದ್ದು, ಈ ಅಸಮತೋಲನದಿಂದ ಮತ್ತಷ್ಟು ಅವಘಡ ಸಂಭವಿಸುವ ಆತಂಕ ಹೆಚ್ಚಿಸಿದೆ.