ನಾನು ಯಾವುದೇ ಜಿಲ್ಲೆಯಲ್ಲಿ ಹೋಗಿ ಮನೆ ಮಾಡುತ್ತಿಲ್ಲ. ನನಗೆ ಇರುವುದು ಒಂದೇ ಮನೆ, ಅದು ಬೆಂಗಳೂರಿನಲ್ಲಿ. ಅದು ಬಿಟ್ಟರೆ 1985ರಲ್ಲಿ ತಂದೆ ತೆಗೆದುಕೊಂಡ ಕೇತಗಾನಹಳ್ಳಿಯ ತೋಟದ ಮನೆ. ಚುನಾವಣೆ ಸಮಯದಲ್ಲಿ ಹೋಗಿ ಬಾಡಿಗೆ ಮನೆ ಮಾಡಿ ಸೋತ ನಂತರ ಮನೆ ಖಾಲಿ ಮಾಡುವ ಜಾಯಮಾನ ನಮ್ಮದಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ವಿರುದ್ಧ ಹೇಳಿಕೆ ನೀಡಿರುವವರಿಗೆ ಭವಿಷ್ಯದಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ಮಾಜಿ ಸಚಿವ ನಾರಾಯಣಗೌಡ ಸೇರಿದಂತೆ ಕೆಲ ಮೈತ್ರಿ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಈ ಮೈತ್ರಿ ಬಗ್ಗೆ ತೀರ್ಮಾನವನ್ನು ನಾವಾಗಲಿ, ನೀವಾಗಲಿ ಮಾಡಿಲ್ಲ. ಈ ಸಂಬಂಧ ಬೆಳೆದಿದ್ದು ದೇವೇಗೌಡರು, ಕುಮಾರಣ್ಣ ಹಾಗೂ ಮಿತ್ರ ಪಕ್ಷದ ಕೇಂದ್ರದ ಬಿಜೆಪಿ ನಾಯಕರಿಂದ ಎಂದರು.
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದು ಇಲ್ಲಿ ಚರ್ಚೆ ಮಾಡಿದರೆ ಏನೂ ಪ್ರಯೋಜನವಾಗಲ್ಲ. ದೆಹಲಿಯಲ್ಲಿ ಎರಡು ಪಕ್ಷಗಳ ಮೈತ್ರಿ ಗಟ್ಟಿಯಾಗಿದೆ. ಮುಂದೆ ಗಟ್ಟಿಯಾಗಿ ಉಳಿಯಲಿದೆ. ಮೈತ್ರಿ ಬಗ್ಗೆ ಹೇಳಿಕೆ ನೀಡುವವವರಿಗೆ ಮುಂದೆ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಟೀಕಿಸಿದರು.ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಪಕ್ಷದ ಮಾತೃ ಭೂಮಿ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಗಟ್ಟಿಯಾಗಿದೆ. ಪಕ್ಷವು ಜನರ ಸೇವೆ ಜೊತೆಗೆ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಎಲ್ಲೆಡೆ ಪಕ್ಷ ಶಕ್ತಿಯಾಗಿ ನಂಟು ಉಳಿಸಿಕೊಂಡಿದ್ದೇವೆ. ಜನರು ಕೂಡ ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಕೊಟ್ಟಿದ್ದಾರೆ ಎಂದರು.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಮಗೆ ಇರುವ ಶಕ್ತಿ ಹಾಗೂ ಬಿಜೆಪಿಗೆ ಇರುವ ಶಕ್ತಿಯಿಂದಾಗಿ ಎರಡು ಪಕ್ಷಗಳ ಸಮ್ಮಿಲನದೊಂದಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶ ಕಣ್ಣ ಮುಂದಿದ್ದು, ರಾಜ್ಯದಿಂದ 19 ಸಂಸದರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.ಹಲವಾರು ಬಾರಿ ನಾನು ಹೇಳಿದ್ದೇನೆ. ಮಿತ್ರ ಪಕ್ಷ ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. ರಾಜ್ಯದ ಜನರ ಆಶೀರ್ವಾದದಿಂದ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮಿತ್ರಕೂಟ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ತಂದೆ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳ ಒತ್ತಡ ಕಡಿಮೆ ಮಾಡಲು ನಿರಂತರವಾಗಿ ನಾನು ಕೂಡ ಕೆಲವೊಂದು ಕಾರ್ಯಕ್ರಮಗಳಿಗೆ ತೆರಳಬೇಕಿದೆ. ಅದರಂತೆ ಜಿಲ್ಲೆಗೆ ಭೇಟಿ ನೀಡಿದ್ದೇನೆ ಎಂದರು.
ನಾನು ಯಾವುದೇ ಜಿಲ್ಲೆಯಲ್ಲಿ ಹೋಗಿ ಮನೆ ಮಾಡುತ್ತಿಲ್ಲ. ನನಗೆ ಇರುವುದು ಒಂದೇ ಮನೆ, ಅದು ಬೆಂಗಳೂರಿನಲ್ಲಿ. ಅದು ಬಿಟ್ಟರೆ 1985ರಲ್ಲಿ ತಂದೆ ತೆಗೆದುಕೊಂಡ ಕೇತಗಾನಹಳ್ಳಿಯ ತೋಟದ ಮನೆ. ಚುನಾವಣೆ ಸಮಯದಲ್ಲಿ ಹೋಗಿ ಬಾಡಿಗೆ ಮನೆ ಮಾಡಿ ಸೋತ ನಂತರ ಮನೆ ಖಾಲಿ ಮಾಡುವ ಜಾಯಮಾನ ನಮ್ಮದಲ್ಲ. ಬದಲಿಗೆ ಜನರ ಮಧ್ಯೆ ಇದ್ದು ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಬೇಕು. ಶಾಶ್ವತ ಸ್ಥಾನ ಪಡೆಯಲು ಹೆಜ್ಜೆ ಹಾಕಬೇಕು. ಮನೆ ಮಾಡುವುದರಿಂದ ಬೇರೆ ಸಂದೇಶ ಕೊಡಬಾರದು ಎಂದು ಹೇಳಿದರು.ಈ ವೇಳೆ ಜೆಡಿಎಸ್ ಮುಖಂಡರಾದ ಬಿ.ಆರ್.ರಾಮಚಂದ್ರ, ಕಿರಣ್ ಕುಮಾರ್ ಸೇರಿದಂತೆ ಇತರರು ಇದ್ದರು.
