ಭತ್ತಕ್ಕೆ ಕೊಳವೆ ರೋಗದ ಭೀತಿ: ರೈತರ ಸಭೆ

| Published : Jan 06 2025, 01:00 AM IST

ಸಾರಾಂಶ

ಭತ್ತದ ಸಸಿಗಳಿಗೆ ಕಳೆದ ವಾರದಿಂದ ಕೊಳವೆ ರೋಗದ ಭೀತಿ ಕಾಡುತ್ತಿರುವ ಹಿನ್ನೆಲೆ ತಾಲೂಕಿನ ರೈತರು ರೈತ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಇಲ್ಲಿನ ವಿಶೇಷ ಎಪಿಎಂಸಿ ಆವರಣದಲ್ಲಿ ಸಭೆ ಸೇರಿ ರೋಗ ತಡೆಗಟ್ಟುವ ಕುರಿತು ಚಿಂತನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ಭತ್ತದ ಸಸಿಗಳಿಗೆ ಕಳೆದ ವಾರದಿಂದ ಕೊಳವೆ ರೋಗದ ಭೀತಿ ಕಾಡುತ್ತಿರುವ ಹಿನ್ನೆಲೆ ತಾಲೂಕಿನ ರೈತರು ರೈತ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಇಲ್ಲಿನ ವಿಶೇಷ ಎಪಿಎಂಸಿ ಆವರಣದಲ್ಲಿ ಸಭೆ ಸೇರಿ ರೋಗ ತಡೆಗಟ್ಟುವ ಕುರಿತು ಚಿಂತನೆ ನಡೆಸಿದರು.

ರೈತ ಮುಖಂಡ ಶರಣಪ್ಪ ದೊಡ್ಡಮನಿ ಮಾತನಾಡಿ, ಕಳೆದ ಬಾರಿ ಅಕಾಲಿಕ ಮಳೆಯಿಂದಾಗಿ ಇಳುವರಿ ಕುಸಿತ ಕಂಡಿದೆ. ಸಾವಿರಾರು ರು. ವ್ಯಯಿಸಿ ಬೆಳೆ ಬೆಳೆದ ರೈತರಿಗೆ ಖರ್ಚು ಮಾಡಿದ ಹಣ ಸಹ ಕೈಸೇರಿಲ್ಲ. ಪರಿಸ್ಥಿತಿ ಹೀಗಿರುವಾಗ ಈಗ ನಾಟಿ ವೇಳೆ ಸಸಿ ಮಡಿಗಳಿಗೆ ತಾಲೂಕಿನ ಬೂದುಗುಂಪಾ, ಮೈಲಾಪುರ, ಯರಡೋಣ, ಚೆಳ್ಳೂರು, ಹುಳ್ಳಿಹಾಳ ಸೇರಿ ಇತರೆಡೆ ಕೊಳವೆ ರೋಗ ಕಾಣಿಸಿಕೊಂಡಿರುವುದು ರೈತರನ್ನು ಕಂಗಾಲುಗೊಳಿಸಿದೆ.

ಪರಿಸ್ಥಿತಿ ಹೀಗಿರುವಾಗ ದೊಡ್ಡ ಹಿಡುವಳಿ ರೈತರು ಸಣ್ಣ ರೈತರಿಗೆ ಜಮೀನು ಗುತ್ತಿಗೆ ನೀಡಿದ ವೇಳೆ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಎಕರೆಗೆ ೧೫, ೨೦, ೨೫ ಮೂಟೆ ಭತ್ತ ಬೆಳೆದರೆ ಕಡಿಮೆ ಗುತ್ತಿಗೆ ಪಡೆಯಿರಿ. ೩೫-೪೦ ಅಥವಾ ಅದಕ್ಕೆ ಮೇಲ್ಪಟ್ಟು ಬೆಳೆ ಬಂದರೆ ನಿಗದಿ ಪಡಿಸಿದ ಗುತ್ತಿಗೆ ಪಡೆಯಿರಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಇದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಎಲಿಗಾರ್ ಹಾಗೂ ವಿಜ್ಞಾನಿ ಸುಜಯ್ ಹುರುಳಿ ಮಾತನಾಡಿ, ಕೊಳವೆ ಕೀಟ ರಾತ್ರಿ ವೇಳೆಯಲ್ಲಿ ಚುರುಕಾಗಿರುವುದರಿಂದ ದೀಪದ ಬಲೆಗಳನ್ನು ಹಾಕಿ ಆಕರ್ಷಿಸಿ ಕೊಲ್ಲಬೇಕು. ಆಶ್ರಯ ಸಸ್ಯಗಳು ಇರದ ಹಾಗೆ ನೋಡಿಕೊಳ್ಳಬೇಕು. ರಾಸಾಯನಿಕಗಳಾದ ಕ್ಲೋರಾಂಟ್ರಿನಿಲಿಪ್ರೋಲ್ ೫೦.ಎಫ್.ಎಸ್. ೪ ಮಿ.ಲೀ. ಪ್ರತಿ ಕೆಜಿ ಬೀಜಕ್ಕೆ ಬೀಜೋಪಚಾರ ಮಾಡಬೇಕು. ಕ್ಲೋರ್ಪೈರಿಪಾಸ್ ೨೦.ಇ.ಸಿ. ೨ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೇರೆಸಿ ಬೀಜವನ್ನು ಅರ್ಧಗಂಟೆ ಈ ದ್ರಾವಣದಲ್ಲಿ ನೆನೆಸಿ ಸಸಿಮಡಿಗೆ ಬಳಸಬೇಕು. ಥಯೋಮಿಥಾಕ್ಸಮ್ ೦.೨ ಗ್ರಾಂ. ಅಥವಾ ಕಾರ್ಬೋಸಲ್ಫಾನ್ ಶೇ. ೨೫ ಇ.ಸಿ. ೨ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ಹರಳು ರೂಪದ ಕೀಟ ನಾಶಕಗಳನ್ನು (೩೦೦ ಚ.ಮೀ. ಪ್ರದೇಶಕ್ಕೆ) ಬಿತ್ತನೆ ಮಾಡಿದ ೧೫ ದಿನಕ್ಕೆ ಪೀಪ್ರೋನಿಲ್ ೦.೬ ಜಿ. ೩೦೦ ಗ್ರಾಂ. ಅಥವಾ ಕ್ಲೋರಾಂಟ್ರಿನಿಲಿಪ್ರೋಲ್ + ೧೦ ಥಯೋಮಿಥಾಕ್ಸಮ್, ೧೮೦ ಗ್ರಾಂ ಹರಳಗಳನ್ನು ಎರಚಬೇಕು. ಈ ಮೂಲಕ ರಸಾಯನಿಕ ಬಳಸುವ ಮೂಲಕ ರೋಗ ಹತೋಟಿಗೆ ತರಬಹುದು ಎಂದು ಸಲಹೆ ನೀಡಿದರು. ಕೃಷಿ ಇಲಾಖೆ ಎಡಿ ಸಂತೋಷ್ ಪಟ್ಟದಕಲ್ಲು, ರೈತ ಸಂಪರ್ಕ ಕೇಂದ್ರದ ಅಧಿಕಾರಿ ನಾಗರಾಜ, ಮಾರುತಿ, ರೈತ ಮುಖಂಡರಾದ ನಾರಾಯಣ ಈಡಿಗೇರ, ಯಮನವಪ್ಪ ಉಳೇನೂರು, ದೊಡ್ಡನಗೌಡ ಶಿವಪೂಜೆ, ಮರಿಯಪ್ಪ ಸಾಲೋಣಿ, ಸಣ್ಣ ರಾಮಣ್ಣ, ಮೌಲಾಸಾಬ್, ರಮೇಶ ಭಂಗಿ ಇದ್ದರು.