ಸಾರಾಂಶ
ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ವಾರ್ಷಿಕ ಕ್ರೀಡಾ ಕೂಟ ನಡೆಯಿತು.
ಉಡುಪಿ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ‘ರಜತ ಕ್ರೀಡಾ ಸಂಭ್ರಮ’
ಕನ್ನಡಪ್ರಭ ವಾರ್ತೆ ಉಡುಪಿಇಂದು ಪತ್ರಿಕೆ ಉದ್ಯಮವಾಗಿ ಬೆಳೆದಿದೆ. ಸುದ್ದಿಯನ್ನು ಸ್ಮರ್ಧಾತ್ಮಕವಾಗಿ ನೀಡುವ ಒತ್ತಡ ಇರುತ್ತದೆ. ಈ ಒತ್ತಡ ನಡುವೆಯೂ ನಿರ್ಭೀತವಾದ ಪತ್ರಿಕೋದ್ಯಮ ಇಂದಿನ ಅತೀ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಜತ ಮಹೋತ್ಸವದ ಪ್ರಯುಕ್ತ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ರಜತ ಕ್ರೀಡಾ ಸಂಭ್ರಮ’ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ, ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.ಕಾರ್ಯದ ಒತ್ತಡದ ನಡುವೆ ಪತ್ರಕರ್ತರು ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರಿಂದ ಮಾನಸಿಕ ಸ್ವಾಸ್ಥ್ಯ, ದೈಹಿಕ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.ಮುಖ್ಯ ಅತಿಥಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಪತ್ರಿಕೋದ್ಯಮ ಪ್ರಭಾವಿ ಮಾಧ್ಯಮವಾಗಿದ್ದು, ಅದರ ಮೂಲಕ ಸಮಾಜದ ಮೇಲೆ ಸತ್ಪರಿಣಾಮ ಬೀರಬೇಕು. ಪತ್ರಕರ್ತರು ದಿನದ 30 ನಿಮಿಷಗಳಷ್ಟಾದರೂ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡಬೇಕು. ಇದರಿಂದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉದ್ಯಮಿ ಆನಂದ ಪಿ. ಸುವರ್ಣ ಮಲ್ಪೆ, ಮಣಿಪಾಲ ಮಾಹೆಯ ಕ್ರೀಡಾ ಕಾರ್ಯದರ್ಶಿ ವಿನೋದ್ ನಾಯಕ್ ಭಾಗವಹಿಸಿದ್ದರು. ಕ್ರೀಡಾಕೂಟಕ್ಕೆ ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಚಾಲನೆ ನೀಡಿದರು.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿ, ಧ್ವಜಾರೋಹಣ ನೆರವೇರಿಸಿದರು. ರಜತ ಮಹೋತ್ಸವ ಸಮಿತಿಯ ಜತೆ ಕಾರ್ಯದರ್ಶಿ ದೀಪಕ್ ಜೈನ್ ನೇತೃತ್ವದಲ್ಲಿ ವಿವಿಧ ತಾಲೂಕು ಸಂಘಗಳ ಸದಸ್ಯರಿಂದ ಪಥ ಸಂಚಲನ ನಡೆಯಿತು. ರಜತ ಮಹೋತ್ಸವ ಸಮಿತಿಯ ಕ್ರೀಡಾ ಸಂಚಾಲಕ ರಾಜು ಖಾರ್ವಿ ನೇತೃತ್ವದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸಲಾಯಿತು. ಕ್ರೀಡಾ ಜ್ಯೋತಿಯನ್ನು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಹಸ್ತಾಂತರಿಸಿದರು.ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಶರೀಫ್ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ಓಟ, ರಿಲೇ, ಹಗ್ಗಜಗ್ಗಾಟ, ಮಡಕೆ ಒಡೆಯುವ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳು ನಡೆದವು.