ಮುಂಡರಗಿ ಪಟ್ಟಣದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ, ಸಾಧಕರಿಗೆ, ದಾನಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.

ಮುಂಡರಗಿ: ಸರ್ಕಾರಿ ಶಾಲೆಗಳ ಪಕ್ಕದಲ್ಲಿಯೇ ಹೊಸ ಕೆಪಿಎಸ್ ಶಾಲೆ ಆರಂಭಿಸಿದರೆ ಸರ್ಕಾರಿ ಶಾಲೆ ಮುಚ್ಚಿ ಹೋಗಲಿದೆ. ರಾಜ್ಯಾದ್ಯಂತ 10ಕ್ಕಿಂತ ಕಡಿಮೆ ಮಕ್ಕಳನ್ನು‌ ಹೊಂದಿದ 1900 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಅವೆಲ್ಲವೂ ಮುಚ್ಚಲಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು.

ಶನಿವಾರ ಪಟ್ಟಣದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ, ಸಾಧಕರಿಗೆ, ದಾನಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಹಳ್ಳಿಗಳಲ್ಲಿ ಹಿಂದೆ 7ನೇ ತರಗತಿ ವರೆಗೆ ಶಾಲೆ ಕಡ್ಡಾಯವಾಗಿ ಇರುತ್ತಿತ್ತು. ಇದೀಗ ಕೊನೆಯ ಪಕ್ಷ 5ನೇ ತರಗತಿ ವರೆಗೆಯಾದರೂ ಸರ್ಕಾರಿ‌ ಶಾಲೆಗಳು ಇರಬೇಕು. ಅವುಗಳನ್ನು ಸ್ಥಗಿತಗೊಳಿಸಬಾರದು ಎಂದು ಸರ್ಕಾರಕ್ಕೆ ತಾವು ಸಲಹೆ ನೀಡಿರುವುದಾಗಿ ಹೊರಟ್ಟಿ ಹೇಳಿದರು.

ಹಿಂದೆ ಸರ್ಕಾರಕ್ಕೆ ಶಿಕ್ಷಣ ಕೊಡುವ ಶಕ್ತಿ ಇಲ್ಲದ ಸಂದರ್ಭದಲ್ಲಿ ರಾಜ್ಯಾದ್ಯಂತ ಅನೇಕ ಮಠ-ಮಾನ್ಯಗಳು ಶಿಕ್ಷಣ ಸಂಸ್ಥೆ ತೆರೆದು ಶಿಕ್ಷಣ ನೀಡುವ ಜತೆಗೆ ಅನ್ನದಾಸೋಹವನ್ನೂ ಪ್ರಾರಂಭಿಸಿದವು. ಇಂತಹ ಹಿಂದುಳಿದ ಪ್ರದೇಶದಲ್ಲಿ 1924ರಲ್ಲಿಯೇ ಅನ್ನದಾನೀಶ್ವರ ಮಠದ ಅಂದಿನ ಶ್ರೀಗಳು ಶಾಲೆ ತೆರೆಯುವ ಮೂಲಕ ಶಿಕ್ಷಣಕ್ಕೆ ಬುನಾದಿ ಹಾಕಿದರು. ಅದು ಈಗ 100 ವರ್ಷ ಪೂರೈಸಿದೆ. ಅನ್ನದಾನೀಶ್ವರ‌ ವಿದ್ಯಾ ಸಂಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಂಡುಕೊಂಡಿದ್ದಾರೆ. ಕೆಜಿ ಯಿಂದ ಪಿಜಿ ವರೆಗೆ ಈ ಭಾಗದ ಮಕ್ಕಳಿಗೆ ಶಿಕ್ಷಣ ನೀಡಿದ ಕೀರ್ತಿ ಮಠದ ಸಂಸ್ಥೆಗೆ ಹಾಗೂ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಜಗದ್ಗುರು ಅನ್ನದಾನೀಶ್ವರ‌ ಸಂ.ಪ.ಪೂ. ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಮಾತನಾಡಿ, ಈ ಸಂಸ್ಥೆ‌ 1924ರಿಂದ ನಡೆದು ಬಂದ ದಾರಿಯನ್ನು‌ ನಾವು ನೋಡಿದ್ದು ಅತ್ಯಂತ ಸಂತಸ ಮೂಡಿಸಿದೆ. ಈ ದೇಶದಲ್ಲಿ ಶಿಕ್ಷಣದ ಕ್ಷೇತ್ರದಲ್ಲಿ ಇಡೀ ಪ್ರಪಂಚ ಗುರುತಿಸುವ ರಾಜ್ಯವೆಂದರೆ ಅದು ಕರ್ನಾಟಕ. ಇದು ನಿನ್ನೆ‌ ಮೊನ್ನೆಯ ಸಾಧನೆ‌ ಅಲ್ಲ, 100 ವರ್ಷಗಳ ಹಿಂದೆ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ನೀಡಿದ ಕೊಡುಗೆ ಮಹತ್ವದ್ದು. ಇಂತಹ ನಿಸ್ವಾರ್ಥ ಸೇವೆ ಮಾಡುವವರಿಗೆ ಸಹಾಯಹಸ್ತ ನೀಡುವ ಗುಣ ಹೊಂದಿರಬೇಕು ಎಂದರು.

ಸಾನ್ನಿಧ್ಯವಹಿಸಿದ್ದ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಸಂಸ್ಕಾರ ದೊರೆತಾಗ ಹೃದಯ-ಭಾವಗಳು‌ ಎರಡೂ‌ ಸಂವೇದನೆಗೊಳ್ಳಲು‌ ಸಾಧ್ಯವಾಗುತ್ತದೆ. ಅಂದಾಗ ಅದು‌ ನಿಜವಾದ ಶಿಕ್ಷಣವಾಗುತ್ತದೆ. ನಾಡಿನ ಅನೇಕ‌ ಮಠಗಳು‌ 100 ವರ್ಷಗಳ ಹಿಂದಿನಿಂದಲೂ‌ ಶಿಕ್ಷಣ‌ ಕೊಡಲು ಪ್ರಾರಂಭಿಸಿವೆ. 1912ರಲ್ಲಿಯೇ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪ್ರೇರಣೆಯಿಂದ ಶ್ರೀಮಠದ ಎಂಟನೇ ಪೀಠಾಧಿಪತಿಯಾಗಿದ್ದ ಸೊರಟೂರು ಅಜ್ಜನವರು ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿದರು. ಆನಂತರ‌ 1924ರಲ್ಲಿ‌‌ ನ್ಯೂ ಇಂಗ್ಲಿಷ್‌ ಮೀಡಿಯಂ ಶಾಲೆ ಪ್ರಾರಂಭಿಸಲಾಗಿತ್ತು. ಇಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭ, ಬೆಳೆಸುವುದು, ನಡೆಸುವುದು ತುಂಬಾ ಕಷ್ಟವಾಗಿದೆ. ನಮ್ಮ ಸಂಸ್ಥೆಯ ಬಹುತೇಕ ಶಾಲಾ-ಕಾಲೇಜುಗಳಲ್ಲಿನ ಅನುದಾನಿತ ಶಿಕ್ಷಕರು ನಿವೃತ್ತಿಯಾಗಿದ್ದು, ಅತಿಥಿ ಶಿಕ್ಷಕರನ್ನು ನೇಮಿಸಿದ್ದೇವೆ. ಅವರಿಗೆ ಪ್ರತಿ ತಿಂಗಳು ₹10ರಿಂದ ₹12 ಲಕ್ಷ ವೇತನ ನೀಡಲಾಗುತ್ತಿದೆ. ಸರ್ಕಾರ ಶಿಕ್ಷಕರ ನೇಮಕ ಮಾಡದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ವುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಶ್ರೀಮಠದ ಉತ್ತರಾಧಿಕಾರಿ‌ ಜ. ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ವಿದ್ಯಾ ಸಮಿತಿ‌ ಗೌರವ ಕಾರ್ಯದರ್ಶಿ ಆರ್.ಆರ್. ಹೆಗಡಾಳ, ಕಾಲೇಜಿನ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಕರಬಸಪ್ಪ‌ ಹಂಚಿನಾಳ, ಕಮರೀನಿಸಾ ಸೈಯದ್, ಡಿಡಿಪಿಯು ಸಿದ್ದಲಿಂಗ ಬಂಡುಮಸನಾಯಕ ಉಪಸ್ಥಿತರಿದ್ದರು. ವಿವಿಧ ಗಣ್ಯರನ್ನು ಗೌರವಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಎಸ್.ಆರ್. ರಿತ್ತಿ‌ ಸ್ವಾಗತಿಸಿದರು.