ಗಮನಸೆಳೆದ ಆರ್‌ಎಸ್‌ಎಸ್ ಆಕರ್ಷಕ ಪಥಸಂಚಲನ

| Published : Oct 07 2024, 01:35 AM IST

ಗಮನಸೆಳೆದ ಆರ್‌ಎಸ್‌ಎಸ್ ಆಕರ್ಷಕ ಪಥಸಂಚಲನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದ ಆಶ್ರಯದಲ್ಲಿ ವಿಜಯದಶಮಿಯ ಉತ್ಸವ ನಿಮಿತ್ತ ಆರ್.ಎಸ್.ಎಸ್. ಪಥಸಂಚಲನವು ಭಾನುವಾರ ಪಟ್ಟಣದ ಭಂಡಾರಿ ಕಾಲೇಜಿನ ಮೈದಾನದಿಂದ ಮಧ್ಯಾಹ್ನ 3.45 ನಿಮಿಷಕ್ಕೆ ಗಣವೇಶಧಾರಿಗಳ ಘೋಷವಾದ್ಯದೊಂದಿಗೆ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದ ಆಶ್ರಯದಲ್ಲಿ ವಿಜಯದಶಮಿಯ ಉತ್ಸವ ನಿಮಿತ್ತ ಆರ್.ಎಸ್.ಎಸ್. ಪಥಸಂಚಲನವು ಭಾನುವಾರ ಪಟ್ಟಣದ ಭಂಡಾರಿ ಕಾಲೇಜಿನ ಮೈದಾನದಿಂದ ಮಧ್ಯಾಹ್ನ 3.45 ನಿಮಿಷಕ್ಕೆ ಗಣವೇಶಧಾರಿಗಳ ಘೋಷವಾದ್ಯದೊಂದಿಗೆ ಆರಂಭವಾಯಿತು.

ಹರದೊಳ್ಳಿ ಮಾರ್ಗವಾಗಿ, ಕಮತಗಿ ನಾಕಾ, ಹೊಸಪೇಟೆ, ಪುರಸಭೆ, ಸರಾಫ ಬಜಾರ್ ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಝಾರ್, ಗುಗ್ಗರಿಪೇಟೆ ಯಾನಮಶೆಟ್ಟಿ ಅಂಗಡಿ, ಕಮತಗಿ ಸರ್ಕಲ್ ಮಾರ್ಗವಾಗಿ ಸಂಚರಿಸಿ ಪುನಃ ಭಂಡಾರಿ ಕಾಲೇಜು ಮೈದಾನಕ್ಕೆ ಸರಿಸುಮಾರು ಸಂಜೆ 4.45 ಗಂಟೆಗೆ ಬಂದು ಸೇರಿತು. ಪಟ್ಟಣದ ಮಲ್ಲಿಕಾರ್ಜುನ ಶೀಲವಂತ, ಸಂಪತ್‌ಕುಮಾರ ರಾಠಿ, ಸಂಜಯ ಕಾರಕೂನ್ ಸೇರಿದಂತೆ ಬಾದಾಮಿ, ಕೆರೂರ, ಬಾಗಲಕೋಟೆ ಮುಂತಾದ ಕಡೆಗಳಿಂದ ಸುಮಾರು 2000ಕ್ಕೂ ಹೆಚ್ಚಿನ ಸಂಖ್ಯೆಯ ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳು, ಯುವಕರು ಗಣವೇಶಧಾರಿಗಳಾಗಿ ಭಾಗವಹಿಸಿದ್ದು ನೋಡುಗರ ಗಮನ ಸೆಳೆಯಿತು.

ಮಾರ್ಗದುದ್ದಕ್ಕೂ ಕೇಸರಿ ಬಣ್ಣದ ಕಮಾನುಗಳು, ರಸ್ತೆ ಮೇಲೆ ಮಹಿಳೆಯರು, ಮಕ್ಕಳು ಬಿಡಿಸಿದ ರಂಗೋಲಿ ಗಣವೇಶಧಾರಿಗಳ ಪಥಸಂಚಲನದಲ್ಲಿ ಗಮನಸೆಳೆದವು. ಇಡೀ ಪಟ್ಟಣವೇ ಕೇಸರಿಮಯವಾದಂತೆ ಭಾಸವಾಗಿತ್ತು. ಕಳೆದ ಒಂದು ವಾರದಿಂದಲೇ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಕಮಾನುಗಳನ್ನು ಅಭಿಮಾನಿ ಯುವಕರು, ಸ್ವಯಂ ಸೇವಕರು ಕಟ್ಟುವ, ತಳಿರುತೋರಣಗಳಿಂದ ಪಟ್ಟಣವನ್ನು ಸಿಂಗರಿಸುವ ಕಾರ್ಯ ಮಾಡಿದ್ದು ಈ ವರ್ಷ ವಿಶೇಷವಾಗಿತ್ತು.

ಪಟ್ಟಣದ ಕೆಳಗಿನ ಪೇಟೆಯ ಕಮತಗಿ ಸರ್ಕಲ್ ಹತ್ತಿರ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾದ್ವಾರ ನಿರ್ಮಿಸಿ, ಸುಭಾಸಚಂದ್ರ ಭೋಸ್, ವಲ್ಲಭಬಾಯಿ ಪಟೇಲ್, ಮಹಾ ರಾಣಾಪ್ರತಾಪಸಿಂಗ್, ಸಂಬಾಜಿ ಬೋಸ್ಲೆ ಅವರ ಬೃಹತ್ ಭಾವಚಿತ್ರಗಳು, ಶ್ರೀರಾಮನ ಭವ್ಯವಾದ ಮೂರ್ತಿ ನಿಲ್ಲಿಸಿ ಗಮನ ಸೆಳೆಯಲಾಗಿತ್ತು. ಶ್ರೀರಾಮನ ಮೂರ್ತಿಯ ಮುಂದುಗಡೆ ವೇಷಧಾರಿ ಮಕ್ಕಳನ್ನು ನಿಲ್ಲಿಸಿ ಪಾಲಕರು ಫೋಟೋ ಕ್ಲಿಕ್ಕಿಸುತ್ತಿರುವುದು ಮನಮೋಹಕವಾಗಿತ್ತು.

ಪುರಸಭೆ ಎದುರುಗಡೆ ಸಾವರ್ಕರ್ ಸಾಮ್ರಾಜ್ಯ ಮಹಾದ್ವಾರ ನಿರ್ಮಿಸಲಾಗಿತ್ತು. ಕ್ರಾಂತಿಕಾರಿ ಭಗತ್ ಸಿಂಗ್, ಸಂಗೋಳ್ಳಿ ರಾಯಣ್ಣ, ಚಂದ್ರಶೇಖರ ಆಝಾದ್, ವೀರ ಸಾವರ್ಕರ್, ಬಸವಣ್ಣ, ಸಿದ್ದೇಶ್ವರ ಶ್ರೀ, ಸಂಘದ ಸಂಸ್ಥಾಪಕ ಡಾ.ಗುರೂಜಿ ಅವರ ಭಾವಚಿತ್ರಗಳನ್ನು ಹಾಕಲಾಗಿತ್ತು. ಪಟ್ಟಣದ ವಿವಿಧೆಡೆಗಳಲ್ಲಿ ಛತ್ರಪತಿ ಶಿವಾಜಿ, ಶ್ರೀರಾಮ, ಶರಣರ ಬೃಹತ್ ಭಾವಚಿತ್ರಗಳನ್ನು ನಿಲ್ಲಿಸಲಾಗಿತ್ತು. ಪಟ್ಟಣದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸರಿ ಪ್ರವೇಶದ್ವಾರಗಳನ್ನು ನಿರ್ಮಿಸಿ, ಕೇಸರಿ ತೋರಣಗಳನ್ನು ಕಟ್ಟಲಾಗಿತ್ತು.