ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಖಾತೆ ತೆರೆಯುವಂತಾಗಲು ಹಗಲಿರುಳು ಪಕ್ಷಕ್ಕಾಗಿ ದುಡಿದ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಅವರನ್ನು ಕೆಲ ಬಿಜೆಪಿ ಮುಖಂಡರು ಬಹಳ ಹೀನಾಯವಾಗಿ ಮಾತನಾಡುತಿದ್ದು, ಅವರಿಗೆ ಬಿ.ಎಸ್.ಯಡಿಯೂರಪ್ಪನವರ ಬಲ ಏನು ಎಂಬುದನ್ನು ತೋರಿಸುವ ಸಲುವಾಗಿ ಮಾರ್ಚ್ 4 ರ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರ ಮಂದಿರದಲ್ಲಿ ಹಳೆ ಮೈಸೂರು ಪ್ರಾಂತದ ವೀರಶೈವ, ಲಿಂಗಾಯಿತ ಮುಖಂಡ ಸಭೆ ಕರೆಯಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೀರಶೈವ-ಲಿಂಗಾಯಿತ ಮುಖಂಡರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಯಡಿಯೂರಪ್ಪನವರ ಬಲ ಪ್ರದರ್ಶನದ ಈ ಸಭೆಗೆ ವೀರಶೈವ ಲಿಂಗಾಯಿತ ಮಹಾಸಂಗಮ ಎಂದು ಹೆಸರಿಡಲಾಗಿದೆ. ಅಂದು ಹಳೆ ಮೈಸೂರು ಭಾಗಕ್ಕೆ ಸೇರಿದ ಎಲ್ಲಾ ಜಿಲ್ಲೆಗಳ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡು ಮುಂದಿನ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಹಾಗಾಗಿ ಈ ಭಾಗದ ಎಲ್ಲಾ ವೀರಶೈವ ಲಿಂಗಾಯಿತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ, ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರು ಎಂದಿಗೂ ಜಾತಿ ಮಾಡಿದವರಲ್ಲ. ಎಲ್ಲಾ ವರ್ಗದ ಮಠ, ಮಾನ್ಯಗಳಿಗೂ ಅನುದಾನ ನೀಡಿ, ಮಠಗಳು ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ನೆರವಾಗಿದ್ದಾರೆ. ಅಂತಹ ವ್ಯಕ್ತಿಯ ಕುಟುಂಬದ ವಿರುದ್ದ ಬಸರಾಜಪಾಟೀಲ್ ಯತ್ನಾಳ್ ಮತ್ತು ಕೆಲ ನಡೆಯದ ನಾಣ್ಯಗಳು ಕಳೆದ ನಾಲ್ಕು ತಿಂಗಳಿನಿಂದ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದರು.ಬಿ.ಎಸ್.ಯಡಿಯೂರಪ್ಪ ಲಿಂಗಾಯಿತ ನಾಯಕರೇ ಅಲ್ಲ. ಅವರ ಕುಟುಂಬದ ಹಿಂದೆ ಯಾವ ವೀರಶೈವರು ಇಲ್ಲ ಎಂಬ ಕ್ಷುಲ್ಲಕ ಹೇಳಿಕೆಗಳನ್ನು ನೀಡುತಿದ್ದಾರೆ. ಇದರಿಂದ ರಾಜ್ಯದ ವೀರಶೈವ,ಲಿಂಗಾಯಿತ ನಾಯಕರಿಗೆ ತೀವ್ರ ಬೇಸರ ಉಂಟಾಗಿದ್ದು, ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಶಕ್ತಿ ಏನು ಎಂದು ತೋರಿಸುವ ಸಲುವಾಗಿಯೇ ಈ ವೀರಶೈವ, ಲಿಂಗಾಯಿತ ಮಹಾಸಂಗಮ ಆಯೋಜಿಸುತಿದ್ದು, ಇದೇ ರೀತಿಯ ಪೂರ್ವಭಾವಿ ಸಭೆ ಉತ್ತರ ಕರ್ನಾಟಕದಲ್ಲಿ ಆದ ನಂತರ, ಒಂದು ಬೃಹತ್ ಸಮಾವೇಶ ನಡೆಸುವ ಆಲೋಚನೆ ಇದೆ ಎಂದು ಎಂ.ಪಿ..ರೇಣುಕಾಚಾರ್ಯ ನುಡಿದರು.
ಅಖಿಲ ಕರ್ನಾಟಕ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಪರಮೇಶ್ ಮಾತನಾಡಿದರು. ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಚಂದ್ರಮೌಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಸ್ವಾಮಿ ಮಾತನಾಡಿದರು.ಸಭೆಯಲ್ಲಿ ಮುಖಂಡರಾದ ದಿಲೀಪ್, ಚಂದ್ರಶೇಖರಬಾಬು , ಕೈಗಾರಿಕಾ ಆಸೋಸಿಯೇಷನ್‌ನ ಅಧ್ಯಕ್ಷ ಗಿರೀಶ್ ಲಿಂಗಾಯಿತ ಸಮುದಾಯಕ್ಕೆ ಸೇರಿದ ವಿವಿಧ ಬ್ಯಾಂಕುಗಳ ಅಧ್ಯಕ್ಷರಾದ ಓಹಿಲೇಶ್ವರ್, ಬಾವಿಕಟ್ಟೆ ಮಂಜುನಾಥ್, ರುದ್ರಪ್ಪ, ಹಿರಿಯರಾದ ಸಿ.ವಿ.ಮಹದೇವಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.