ಬಾಕಿ ಕಾಮಗಾರಿ ಪೂರ್ಣಗೊಳಿಸಲು ಫೆಬ್ರವರಿ ಗಡುವು

| Published : Dec 25 2024, 12:48 AM IST

ಸಾರಾಂಶ

ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡಿದ್ದ ೨೭ ಕೋಟಿ ರು.ಗಳ ಅನುದಾನದಲ್ಲಿ ಶೇ.70 ರಷ್ಟು ಕಾಮಗಾರಿಗಳನ್ನು ಗುತ್ತಿಗೆದಾರರು ಮಾಡದೆ ಇದ್ದುದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಈಗ ಸಚಿವರೊಂದಿಗೆ ಚರ್ಚಿಸಿ ಕಾಮಗಾರಿ ಉಪಗುತ್ತಿಗೆ ನೀಡಲಾಗಿದ್ದು, ಪ್ರತಿಯೊಂದು ವಾರ್ಡ್‌ಗೂ ೬೦ ರಿಂದ ೭೫ ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ನಗರೋತ್ಥಾನ ಯೋಜನೆಯಡಿ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದೆ ಹಾಗೆಯೇ ಬಿಟ್ಟು ಹೋಗಿದ್ದರಿಂದ ಕಳೆದ ೬ ತಿಂಗಳಿನಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡಲಾಗಿದೆ. ಮುಂದಿನ ಫೆಬ್ರವರಿ ಒಳಗೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.

ನಗರದ ವಿಲಿಯಂ ರಿಚರ್ಡ್ ಶಾಲೆಯ ಹಿಂಭಾಗ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ ನಗರಸಭೆಯಲ್ಲಿ ಪದೇಪದೇ ಚರ್ಚೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ, ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ಉಪಗುತ್ತಿಗೆ ನೀಡಲಾಗಿದೆ ಎಂದರು.

ಪ್ರತಿ ವಾರ್ಡ್‌ಗೆ ಅನುದಾನ

ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡಿದ್ದ ೨೭ ಕೋಟಿ ರು.ಗಳ ಅನುದಾನದಲ್ಲಿ ಶೇ.70 ರಷ್ಟು ಕಾಮಗಾರಿಗಳನ್ನು ಗುತ್ತಿಗೆದಾರರು ಮಾಡದೆ ಇದ್ದುದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಈಗ ಸಚಿವರೊಂದಿಗೆ ಚರ್ಚಿಸಿ ಕಾಮಗಾರಿ ಉಪಗುತ್ತಿಗೆ ನೀಡಲಾಗಿದ್ದು, ಪ್ರತಿಯೊಂದು ವಾರ್ಡ್‌ಗೂ ೬೦ ರಿಂದ ೭೫ ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ರಸ್ತೆ, ಕಾಲುವೆ ಪುಟ್‌ಪಾತ್‌ಗಳನ್ನು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದರು. ನಗರೋತ್ಥಾನ ಯೋಜನೆಯಡಿ ನಡೆಯುವ ಪ್ರತಿಯೊಂದು ಕಾಮಗಾರಿಯ ಪ್ರಗತಿ ಪರಿಶೀಲನೆ ನಗರಸಭೆ ಅಧ್ಯಕ್ಷರು, ಸ್ಥಳೀಯ ಸದಸ್ಯರನ್ನು ಜೊತೆಯಲ್ಲಿ ಇಟ್ಟುಕೊಂಡು ಮಾಡಲಾಗುವುದು. ೨ ತಿಂಗಳಲ್ಲಿ ಒಂದೇ ಬಾರಿ ಎಲ್ಲಾ ಕಡೆ ಕೆಲಸ ಕೈಗೊಳ್ಳಲಾಗುವುದು. ಯಾವುದೇ ವಾರ್ಡ್‌ಗಳಿಗೆ ತಾರತಾಮ್ಯವನ್ನು ಮಾಡಲಾಗುವುದಿಲ್ಲ. ೨೦ ಕೋಟಿ ಅನುದಾನದಲ್ಲಿ ೩೫ ವಾರ್ಡ್‌ಗಳಲ್ಲಿ ರಸ್ತೆ ಚರಂಡಿ ಫುಟ್‌ಪಾತ್ ಕೆಲಸಗಳನ್ನು ಮಾಡಲಾಗುತ್ತದೆ ಎಂದರು.ಕಾಮಗಾರಿ ಗುಣಮಟ್ಟ ಕಾಪಾಡಿ

ಎಸ್‌ಎಫ್‌ಸಿ ಯೋಜನೆಯಡಿ ೩೮ ಲಕ್ಷ ರು. ಅನುದಾನದಲ್ಲಿ ಉರಿಗಾಂಪೇಟೆ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟ ವೀಕ್ಷಣೆ ಮಾಡಿ ಮಾಡಿ, ಡಾಂಬರೀಕರಣ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದರೆ ಡಾಂಬರು ೬ ತಿಂಗಳೂ ನಿಲ್ಲುವುದಿಲ್ಲ. ಒಂದು ಮಳೆ ಬಂದರೆ ಸಾಕು ಡಾಂಬರು ಕಿತ್ತುಹೋಗುತ್ತದೆ ಎಂದು ಎಚ್ಚರಿಸಿದರು.

ರಸ್ತೆಯಲ್ಲಿ ಬೀಳುವ ಮಳೆ ನೀರು ಕಾಲುವೆಗೆ ಸರಾಗವಾಗಿ ಹರಿದುಹೊಗುವಂತೆ ನಿರ್ಮಿಸಬೇಕು ಎಂದು ಹೇಳಿ ವೈಜ್ಞಾನಿಕ ರೀತಿಯಲ್ಲಿ ಕೆಲಸವನ್ನು ನಿರ್ಮಿಸುವಂತೆ ಸೂಚಿಸಿದ್ದು, ಇನ್ನು ಮುಂದೆ ಮಳೆ ಬಂದರೆ ಯಾವುದೇ ಕಾರಣಕ್ಕೂ ಉರಿಗಾಂಪೇಟೆ ನಿವಾಸಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಇಂದಿರಾ ಗಾಂಧಿ ದಯಾಶಂಕರ್, ನಗರಸಭೆ ಸದಸ್ಯರಾದ ಜಯಪಾಲ್, ಕರುಣಾಕರನ್, ವೇಣುಗೋಪಾಲ್, ಮಗಿ, ಫ್ರಭು, ಸುಭಾಷಿಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದುಲೈ ಮುತ್ತು, ಶಶಿಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಸಿ ಮುರಳಿ, ಎಇಇ ಮಂಜುನಾಥ್ ಇದ್ದರು.