ಸಾರಾಂಶ
. ದೊಡ್ಡಮಟ್ಟದ ಜನಾಂಗಗಳನ್ನು ಕೊಂದು ಹಾಕಿದರೆ ಮಿಕ್ಕ ಜನಾಂಗಗಳು ಹೆದರುತ್ತವೆ ಎಂಬುದನ್ನು ಚರಿತ್ರೆಯಲ್ಲಿ ಹೇಳಲಾಗಿದೆ. ಇದರ ಬಗ್ಗೆ ಸಂಶೋಧನೆಗಳು ನಡೆದರೆ ತಿಳಿಯುತ್ತದೆ
ಕನ್ನಡಪ್ರಭ ವಾರ್ತೆ ನಂಜನಗೂಡು
ಶೋಷಿತರು ಪ್ರತಿಭಾವಂತರಾಗಿದ್ದರೂ, ಅವರಿಗೆಲ್ಲ ವಿದ್ಯೆ ಸಿಕ್ಕಿದ್ದರೆ ಇನ್ನೂ ಉನ್ನತ ಸ್ಥಾನಕ್ಕೆ ಏರುತ್ತಿದ್ದರು. ದೇಶದ ಪ್ರಮುಖ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ದೇಶ ಮುಂದುವರೆಯುತ್ತಿತ್ತು ಎಂದು ಪ್ರಗತಿಪರ ಚಿಂತಕ ಮುಕುಂದರಾಜು ಹೇಳಿದರು.ನಗರದ ದಲಿತ ಸಂಘಟನೆಗಳ ಒಕ್ಕೂಟ ಭಾನುವಾರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಭೀಮ ಕೋರಂಗಾವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚರಿತ್ರೆಯಲ್ಲಿ ಉಲ್ಲೇಖಿಸಿರುವಂತೆ 17ನೇ ಶತಮಾನದಲ್ಲಿ ಚಿಕ್ಕ ದೇವರಾಜ ಒಡೆಯರ್ ಆಸ್ಥಾನದಲ್ಲಿದ್ದ ವಿಶಾಲಾಕ್ಷ ಪಂಡಿತ ಎನ್ನುವ ಮಂತ್ರಿ ಸುಮಾರು 500 ಲಿಂಗಾಯಿತ ಸ್ವಾಮಿಗಳಲ್ಲಿ ಒಬ್ಬೊಬ್ಬರ ತಲೆ ಕಡಿದು ಬಾವಿಗೆ ಎಸೆಯಿಸಿದ್ದ, ಲಿಂಗಾಯಿತರ ಮೇಲೆ ಇತ್ತೀಚೆಗೂ ಕೂಡ ಹಲ್ಲೆ, ಕೊಲೆಗಳು ನಡೆಯುತ್ತಿವೆ. 12ನೇ ಶತಮಾನದಲ್ಲಿ ಲಕ್ಷಾಂತರ ಜಂಗಮರನ್ನು ಹತ್ಯೆ ಮಾಡಲಾಗಿತ್ತು. ಕಲ್ಬುರ್ಗಿ, ಲಿಂಗಣ್ಣ ಸತ್ಯಪೇಟೆ, ಗೌರಿ ಲಂಕೇಶ್ ಅರನ್ನು ಹತ್ಯೆ ಮಾಡಲಾಗಿದೆ. ದೊಡ್ಡಮಟ್ಟದ ಜನಾಂಗಗಳನ್ನು ಕೊಂದು ಹಾಕಿದರೆ ಮಿಕ್ಕ ಜನಾಂಗಗಳು ಹೆದರುತ್ತವೆ ಎಂಬುದನ್ನು ಚರಿತ್ರೆಯಲ್ಲಿ ಹೇಳಲಾಗಿದೆ. ಇದರ ಬಗ್ಗೆ ಸಂಶೋಧನೆಗಳು ನಡೆದರೆ ತಿಳಿಯುತ್ತದೆ ಎಂದು ಅವರು ಹೇಳಿದರು.ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ವಿಜಯ್ ಕುಮಾರ್ ಮಾತನಾಡಿ, ಇದು ಒಂದು ಐತಿಹಾಸಿಕ ಕಾರ್ಯಕ್ರಮ. 500 ಮಂದಿ ಮಾದರ ಸೈನಿಕರು 25,000ಕ್ಕೂ ಹೆಚ್ಚಿv ಪೇಶ್ವೆ ಸೈನಿಕರನ್ನು ಹೊಡೆದುರುಳಿಸಿ ಅವರನ್ನು ಯಮಲೋಕಕ್ಕೆ ಅಟ್ಟಿದ ಸುದಿನ. ಈ ಕಥೆಯನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು. ಈ ಯುದ್ದ ಯಾವುದೇ ಹಣ, ಆಸ್ತಿ, ಹೆಣ್ಣಿಗಾಗಿ ನಡೆದ ಯುದ್ಧವಲ್ಲ. ದಲಿತರ ಸ್ವಾಭಿಮಾನಕ್ಕಾಗಿ ನಡೆದ ಯುದ್ಧ. ನಮ್ಮ ಮುಂದಿನ ತಲೆಮಾರುಗಳು ಈ ಸಂಸ್ಕೃತಿ ಬೆಳೆಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.
ನಗರದ ಕ್ರೀಡಾಂಗಣದಲ್ಲಿ ಕೊರೆಗಾಂವ್ ವಿಜಯೋತ್ಸವದ ಸ್ತಬ್ಧಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾಂಗ್ರೆಸ್ ಮುಖಂಡ ಕಳಲೆ ಕೇಶವಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆ ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ, ಕಂಸಾಳೆ ಮುಂತಾದ ಜಾನಪದ ಕಲಾ ತಂಡಗಳೊಂದಿಗೆ ರಾಷ್ಟ್ರಪತಿ ರಸ್ತೆಯ ಮೂಲಕ ಶ್ರೀಕಂಠೇಶ್ವರನ ದೇವಾಲಯ, ಬಜಾರ್ ರಸ್ತೆ ಮೂಲಕ ಅಂಬೇಡ್ಕರ್ ಭವನ ತಲುಪಿತು.
ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಅಭಿ ನಾಗಭೂಷಣ, ಮಲ್ಲಹಳ್ಳಿ ನಾರಾಯಣ, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ಜಯಶಂಕರ್, ಯಶವಂತ್, ಶಂಕರಪುರ ಸುರೇಶ್, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಪುಟ್ಟಸ್ವಾಮಿ, ಸತೀಶ್ ರಾವ್ ಮೊದಲಾದವರು ಇದ್ದರು.