ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿ ಗಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ಗ್ಯಾರಂಟಿ ಕಾನೂನು ಜಾರಿಗೆ ಆಗ್ರಹಿಸಿ ರಾಷ್ಟ್ರೀಯ ರೈತ ನಾಯಕ ದಲೈವಾಲಾ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಮೈಸೂರಿನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಭಾನುವಾರ ಟ್ರ್ಯಾಕ್ಟರ್ ರ್‍ಯಾಲಿ ಹಮ್ಮಿಕೊಂಡಿದ್ದರು.ನಗರದ ಬಂಡಿಪಾಳ್ಯ ಎಪಿಎಂಸಿ ವೃತ್ತದಿಂದ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಕಡಕೊಳ ಬಳಿ ಇರುವ ಟೋಲ್ ವರೆಗೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ, ಅರ್ಧ ಗಂಟೆ ಟೋಲ್ ಬಂದ್ ಮಾಡಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದರಿಂದಾಗಿ ವಾಹನಗಳು ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಯಿತು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ಡಾ. ಸ್ವಾಮಿನಾಥನ್ ವರದಿ ಅನುಷ್ಠಾನ, ರೈತರ ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ದಲೈವಾಲಾ ಅವರ 62ನೇ ದಿನದ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಈ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ದೇಶಾದ್ಯಂತ ಇಂದು ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ, ರೈತರಿಗೆ ಸ್ವಾತಂತ್ರ್ಯವೇ ಸಿಕ್ಕಿಲ್ಲ. ದೇಶದ ರೈತರ ಒಳಿತಿಗಾಗಿ 62 ದಿನಗಳಿಂದ ಉಪವಾಸ ನಡೆಸುತ್ತಿರುವ ದಲೈವಾಲಾ ಅವರು ಕೇಂದ್ರ ಸರ್ಕಾರ ಹಾಗೂ ನ್ಯಾಯಾಧೀಶರ ಮನವಿ ಮೇರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಚಳವಳಿ ಕೈಬಿಟ್ಟಿಲ್ಲ ಎಂದು ತಿಳಿಸಿದರು.
ರೈತರ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗಿದೆ. ಫೆಬ್ರವರಿ ಎರಡನೇ ವಾರದಲ್ಲಿ ಕರ್ನಾಟಕದ ರೈತರ ತಂಡ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಚಳವಳಿಯಲ್ಲಿ ಭಾಗವಹಿಸಲಿದೆ. ಸರ್ಕಾರ ರೈತರ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.ಸಂಘದ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಪಿ. ಸೋಮಶೇಖರ್, ಕಿರಗಸೂರು ಶಂಕರ್, ನೀಲಕಂಠಪ್ಪ, ವಿಜಯೇಂದ್ರ, ಸಿದ್ದೇಶ್, ವೆಂಕಟೇಶ್, ರಾಜೇಶ್, ಪ್ರಭುಸ್ವಾಮಿ, ಮಂಜುನಾಥ್, ಗಿರೀಶ್, ಕೆಂಡಗಣಸ್ವಾಮಿ, ಪ್ರಸಾದ್ ನಾಯ್ಕ್, ಪ್ರದೀಪ್ ಗೌರಿಶಂಕರ್, ಗುರುಸ್ವಾಮಿ, ಕೆಂಡಗಂಣಪ್ಪ, ಸುನಿಲ್, ಕಮಲಮ್ಮ, ಕೂಡನಹಳ್ಳಿ ಸೋಮಣ್ಣ, ನಾಗೇಶ್, ಸೂರಿ, ಅರುಣ್, ಲಿಂಗಣ್ಣ, ಮಾದೇವಸ್ವಾಮಿ, ನಾಗೇಶ, ಮಾರ್ವಳ್ಳಿ ಬಸವರಾಜ್, ಬಸವರಾಜಪ್ಪ ಮೊದಲಾದವರು ಇದ್ದರು