ಮುಕ್ತವಾಗಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ

| Published : Apr 30 2024, 02:08 AM IST

ಸಾರಾಂಶ

ಮತದಾರರು ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇರುವ ಕುರಿತು ಖುದ್ದು ಪರಿಶೀಲಿಸಬಹುದು. ಮತದಾರ ಸಹಾಯವಾಣಿ 1950ಗೆ ಕರೆ ಮಾಡಿ ತಿಳಿಯಬಹುದು.

ಧಾರವಾಡ:

ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಸೋಮವಾರ ನಗರದ ಗೊಲ್ಲರ ಕಾಲನಿ, ಮೇದಾರ ಓಣಿ ಮುಂತಾದ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ವೋಟರ್‌ ಸ್ಲಿಪ್ ತಲುಪಿರುವ ಬಗ್ಗೆ ಖಚಿತಪಡಿಸಿಕೊಂಡರು.ಗೊಲ್ಲರ ಓಣಿ ಮತದಾರರಾದ ವಸರವ್ವ ಜಕಾತಿ, ಯಲ್ಲವ್ವ ಉಣಕಲ್ಲ, ತಿಪ್ಪಣ್ಣ ಗೊಲ್ಲರ, ಶಾಂತವ್ವ ದೊಡವಾಡ ಮನೆಗಳಲ್ಲಿನ ವೋಟರ್ ಸ್ಲಿಪ್ ಪರಿಶೀಲಿಸಿ ಅವರೊಂದಿಗೆ ಮತದಾರ ಗುರುತಿನ ಪತ್ರ, ವೋಟರ್ ಸ್ಲಿಪ್, ಮತಗಟ್ಟೆಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಯಾವುದೇ ಭಯ, ಆತಂಕಗಳಿಲ್ಲದೆ ಮುಕ್ತವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ತಿಳಿಸಿದರು.ಜಿಲ್ಲೆಯಲ್ಲಿರುವ 1660 ಮತಗಟ್ಟೆಗಳಲ್ಲಿರುವ ಪ್ರತಿ ಮತಗಟ್ಟೆ ಮಟ್ಟದ ಅಧಿಕಾರಿಗಳು, ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಪ್ರತಿ ಮತದಾರನಿಗೆ ವೋಟರ್ ಸ್ಲಿಪ್, ಪ್ರತಿ ಕುಟುಂಬಕ್ಕೆ ಮತದಾನ ಮಾಹಿತಿ ಇರುವ ಒಂದು ವೋಟರ್ ಗೈಡ್ ವಿತರಿಸುತ್ತಾರೆ. ಇದು ತಲುಪಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದುಕೊಂಡರು.

ಮೊದಲ ಬಾರಿಗೆ ಮತ ಚಲಾಯಿಸಲಿರುವ 18ರಿಂದ 19 ವರ್ಷದೊಳಗಿನ ಯುವ ಮತದಾರರಿಗೆ ವೋಟರ್ ಸ್ಲಿಪ್‌ದೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ (ಲೇಟರ್ ಹೆಡ್ ಮೇಲೆ) ವಿಶೇಷವಾಗಿ ಶುಭಾಶಯ ಪತ್ರ ಸಹ ತಲುಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಿ, ನವ ಮತದಾರರನ್ನು ಮತದಾನಕ್ಕೆ ಬರುವಂತೆ ಪ್ರೇರಣೆ ನೀಡಿದರು.

ಮತದಾರರು ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇರುವ ಕುರಿತು ಖುದ್ದು ಪರಿಶೀಲಿಸಬಹುದು. ಮತದಾರ ಸಹಾಯವಾಣಿ 1950ಗೆ ಕರೆ ಮಾಡಿ ತಿಳಿಯಬಹುದು ಎಂದ ಅವರು, ಮತಗಟ್ಟೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡು ಹೋಗುವಂತಿಲ್ಲ ಎಂದರು.

ಮತದಾರ ಮನೆ ಭೇಟಿ ವೇಳೆ ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ, ಮತಗಟ್ಟೆ ಮಟ್ಟದ ಅಧಿಕಾರಿಗಳಾದ ನಿರ್ಮಲಾ ಲಕ್ಕುಂಡಿ, ದ್ರಾಕ್ಷಾಯಣಿ ಹಡಗಲಿ, ಉಮಾ ಮುಳ್ಳಮ್ಮ ಇದ್ದರು.