ಸಾರಾಂಶ
ಒಬ್ಬ ಒಳ್ಳೆಯ ಶಿಷ್ಯನಿಗೆ ಒಳ್ಳೆ ಗುರು ಸಿಗುವುದು ಎಷ್ಟು ಕಷ್ಟವೋ ಹಾಗೆಯೇ ಒಬ್ಬ ಒಳ್ಳೆಯ ಗುರುವಿಗೆ ಒಳ್ಳೆಯ ಶಿಷ್ಯ ಸಿಗುವುದು ಅಷ್ಟೇ ಕಷ್ಟ. ಆ ನಿಟ್ಟಿನಲ್ಲಿ ಉಭಯ ಗುರುಗಳ ನೆನಪಿನಲ್ಲಿ ಸ್ಮರಣೋತ್ಸವ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.
ಕೊಪ್ಪಳ: ಚಿಕ್ಕವರು, ದೊಡ್ಡವರು ಅಷ್ಟೇ ಅಲ್ಲ, ಎಲ್ಲ ಭಾಷಿಗರಿಗೂ ಅರ್ಥವಾಗುವ ಭಾಷೆ ಸಂಗೀತ. ಭಾಷೆ ಮೀರಿದ ಭಾವನೆಯನ್ನು ಸಂಗೀತದಲ್ಲಿ ಕಾಣಬಹುದಾಗಿದೆ ಎಂದು ಗ್ರಾಮೀಣ ಠಾಣೆಯ ಪಿಐ ಮಹಾಂತೇಶ ಸಜ್ಜನ ಹೇಳಿದರು.
ಭಾಗ್ಯನಗರದಲ್ಲಿ ಪಟ್ಟಣ ಪಂಚಾಯಿತಿ ಬಳಿ, ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ದೆಹಲಿ ಸಹಯೋಗದಲ್ಲಿ ಸಂಗೀತ ದಿಗ್ಗಜ ದಿ.ಪಂ ಗೋವಿಂದರಾಜ ಬೊಮ್ಮಲಾಪುರ ಹಾಗೂ ದಿ.ಪಂ.ಅಂಬಣ್ಣ ಕೊಪ್ಪರದರವರ 3ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಗುರು ಪುಟ್ಟರಾಜ ಕಲಾ ಮಹೋತ್ಸವ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಿವೃತ್ತ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಮಾತನಾಡಿ, ಒಬ್ಬ ಒಳ್ಳೆಯ ಶಿಷ್ಯನಿಗೆ ಒಳ್ಳೆ ಗುರು ಸಿಗುವುದು ಎಷ್ಟು ಕಷ್ಟವೋ ಹಾಗೆಯೇ ಒಬ್ಬ ಒಳ್ಳೆಯ ಗುರುವಿಗೆ ಒಳ್ಳೆಯ ಶಿಷ್ಯ ಸಿಗುವುದು ಅಷ್ಟೇ ಕಷ್ಟ. ಆ ನಿಟ್ಟಿನಲ್ಲಿ ಉಭಯ ಗುರುಗಳ ನೆನಪಿನಲ್ಲಿ ಸ್ಮರಣೋತ್ಸವ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಪ್ಪ ಶ್ಯಾವಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಪಂಚಾಕ್ಷರಕುಮಾರ ಬೊಮ್ಮಲಾಪುರ, ಹೇಮಾವತಿ ಅಂಬಣ್ಣ, ಶಿವರಾಮ್ ಮ್ಯಾಗಲಮಾಣಿ, ಶರಣಪ್ಪ ನಾಯಕ, ಶಂಕ್ರಪ್ಪ ಬೇನಾಳ ಮುಂತಾದವರಿದ್ದರು.ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ಪತ್ರಕರ್ತ ದತ್ತು ಕಮ್ಮಾರ, ಶ್ರೀಕಾಂತ ಅಕ್ಕಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.