ಸಾರಾಂಶ
ಉತ್ತಮ ಜೀವನ ನಿರ್ವಹಿಸಲು ಯಾವ ಮಾರ್ಗ ಕಂಡುಕೊಳ್ಳಬೇಕೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಭಕ್ತಿ, ನೆಮ್ಮದಿ ದೊರೆಯಲು ಮಂದಿರಗಳು ಸಹಕಾರಿಯಾಗಿವೆ.
ಯಲ್ಲಾಪುರ: ಯಾಂತ್ರಿಕ ಯುಗದಲ್ಲಿರುವ ನಮಗೆ ಅದರಲ್ಲೂ ಯುವಕರಿಗೆ ನಾವು ಹೇಗೆ ಸಾಗಬೇಕೆನ್ನುವ ಮಾರ್ಗಗಳೇ ದೊರೆಯುತ್ತಿಲ್ಲ. ಸ್ವಾರ್ಥ ಹೆಚ್ಚುತ್ತಿದೆ. ವ್ಯಸನಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳುತ್ತಿದ್ದೇವೆ. ಹಣವೇ ಸರ್ವಸ್ವವೆಂಬ ಭಾವನೆ ಬೆಳೆದ ಪರಿಣಾಮ ಮಾನವನು ದುಃಸ್ಥಿತಿಗೆ ತಲುಪಲು ಕಾರಣವಾಗುತ್ತಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಅ. ೧೭ರಂದು ಪಟ್ಟಣದ ನಾಯಕನಕೆರೆಯ ದತ್ತ ಮಂದಿರದ ಪುನರ್ ನಿರ್ಮಾಣ ಕಾರ್ಯದ ನಿಧಿಕುಂಭ ಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.ಉತ್ತಮ ಜೀವನ ನಿರ್ವಹಿಸಲು ಯಾವ ಮಾರ್ಗ ಕಂಡುಕೊಳ್ಳಬೇಕೆಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದ ಅವರು, ಭಕ್ತಿ, ನೆಮ್ಮದಿ ದೊರೆಯಲು ಮಂದಿರಗಳು ಸಹಕಾರಿಯಾಗಿವೆ. ಆ ದೃಷ್ಟಿಯಿಂದ ರಾಘವೇಶ್ವರ ಶ್ರೀಗಳು ಒಂದು ವರ್ಷದಲ್ಲಿ ಶಿಲಾಮಯ ಮಂದಿರ ನಿರ್ಮಿಸಲು ಇಲ್ಲಿ ಸಂಕಲ್ಪಿಸಿದ್ದಾರೆ. ಅವರ ಸಂಕಲ್ಪದಂತೆ ಇಲ್ಲಿ ಗುಡಿ ನಿರ್ಮಾಣವಾಗುತ್ತದೆ ಎಂದರು.ಹಿರಿಯ ಜ್ಯೋತಿರ್ವಿದ್ವಾಂಸ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಮಾತನಾಡಿ, ಮಾನವನಾಗಿ ಹುಟ್ಟುವುದಕ್ಕೆ ಪುಣ್ಯ ಬೇಕು. ಇಲ್ಲಿ ಮೂವರು ಯತಿಗಳಿಂದ ಈ ದತ್ತಾತ್ರೇಯ ಮಂದಿರ ಸ್ಥಾಪಿಸಲ್ಪಟ್ಟಿದೆ. ನಮ್ಮ ಕುಟುಂಬದ ಪೂಜ್ಯರಾದ ಯೋಗೀಶ್ವರರು ಸ್ವರ್ಣವಲ್ಲಿಯ ಸರ್ವಜ್ಞೇಂದ್ರರು ಇಲ್ಲಿ ದತ್ತಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ನಂತರ ಶಿವಾನಂದರು ಇದರ ನೇತೃತ್ವ ವಹಿಸಿ, ಮಂದಿರ ಉತ್ತುಂಗಕ್ಕೇರಲು ಕಾರಣರಾಗಿದ್ದರು. ಆದರೆ ನಾಲ್ಕನೇ ಯತಿಗಳಾದ ರಾಘವೇಶ್ವರರು ಈ ಗುಡಿಯ ಪುನರ್ ಪ್ರತಿಷ್ಠೆಯ ಕಾರ್ಯಕ್ಕೆ ಸಂಕಲ್ಪ ಮಾಡಿದ್ದಾರೆ. ನಾವೆಲ್ಲ ಭಕ್ತರು ಕೈಜೋಡಿಸಬೇಕು ಎಂದ ಅವರು, ಈ ಮಂದಿರವನ್ನು ಪ್ರತಿಷ್ಠಾಪಿಸಿದ ಮೂವರು ಯತಿಗಳ ಮೂರ್ತಿಯನ್ನು ಸ್ಥಾಪಿಸಿದಾಗ ಇದೊಂದು ಶಕ್ತಿಪೀಠವಾಗಿ ಬೆಳೆಯುವುದಕ್ಕೆ ಹೆಚ್ಚು ಸಹಕಾರಿಯಾಗುವುದೆಂಬುದು ನನ್ನ ಭಾವನೆ ಎಂದರು.ರಾಮಚಂದ್ರಾಪುರ ಮಠದ ಪ್ರತಿನಿಧಿ ಮಹೇಶ ಚಟ್ನಳ್ಳಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಕಟ್ಟಡ ಸಮಿತಿ ಅಧ್ಯಕ್ಷರೂ, ಕಾರ್ಯಕ್ರಮದ ಅಧ್ಯಕ್ಷರೂ ಆದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ಈ ಪ್ರದೇಶದ ಅನೇಕರು ಗುಡಿ ನಿರ್ಮಾಣದ ಕನಸು ಕಂಡಿದ್ದರು. ಆದರೆ, ರಾಘವೇಶ್ವರರ ಸಂಕಲ್ಪದಂತೆ ಕೇವಲ ಒಂದು ವರ್ಷದಲ್ಲಿ ಗುಡಿ ನಿರ್ಮಾಣಗೊಂಡು ಡಿ. ೧೪ರಂದು ನಡೆಯುವ ದತ್ತ ಜಯಂತಿಯಂದು ನೂತನ ಗುಡಿಯೊಳಗೆ ಮೂರ್ತಿ ಪ್ರತಿಷ್ಠಾಪಿಸಲ್ಪಡುತ್ತದೆ. ನಿಧಿಕುಂಭ ಕಾರ್ಯಕ್ರಮ ಕೂಡಾ ಅತ್ಯಂತ ಮಹತ್ವವಾದುದು ಎಂದರು.ದೀಕ್ಷಾ ಹೆಗಡೆ ಪ್ರಾರ್ಥಿಸಿದರು. ಸಂಕಲ್ಪದ ಅಧ್ಯಕ್ಷ ಪ್ರಮೋದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಟಿ. ಭಟ್ಟ ಗುಂಡ್ಕಲ್ ಮತ್ತು ನಾಗರಾಜ ಮದ್ಗುಣಿ ನಿರ್ವಹಿಸಿದರು. ದೇವಸ್ಥಾನದ ಉಸ್ತುವಾರಿ ಎಸ್.ವಿ. ಯಾಜಿ ವಂದಿಸಿದರು.