ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿಗೆ ಭಾಜನರಾದ ಎಲಿಯಂಗಾಡು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ. ಎಸ್. ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿಗೆ ಭಾಜನರಾದ ಎಲಿಯಂಗಾಡು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ. ಎಸ್. ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.ಎಲಿಯಂಗಾಡು ಸರಕಾರಿ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಎಲಿಯಂಗಾಡು ಯುವಕ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಅವರ ಸೇವೆಯನ್ನು ಗುಣಗಾನಗೈದು ಗೌರವಿಸಲಾಯಿತು. ಸ್ಥಳೀಯ ಶಾಲೆಯ ಶಿಕ್ಷಕಿಯೊಬ್ಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಇಡೀ ಗ್ರಾಮಕ್ಕೆ ಸಲ್ಲುವ ಗೌರವವಾಗಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಲುಗುಂದ ಗ್ರಾ. ಪಂ. ಮಾಜಿ ಸದಸ್ಯರಾದ ಅಬ್ದುಲ್ ರಹಿಮಾನ್ (ಅಂದಾಯಿ) ಅಭಿಪ್ರಾಯ ಪಟ್ಟರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಅಶ್ವಿನಿ, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರ ಸಹಕಾರವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪಿ. ಎ. ಅಬ್ಬಾಸ್, ಮಸ್ಜಿದ್ ರಸಾದಿನ ಅಧ್ಯಕ್ಷರಾದ ಅಬ್ದುಲ್ ಸಲಾಂ, ಸ್ಥಳೀಯ ಮಸೀದಿ ಉಪಾಧ್ಯಕ್ಷರಾದ ಉಪಾಧ್ಯಕ್ಷ ಸಂಸುದ್ದೀನ್, ಕಾರ್ಯದರ್ಶಿ ಹಂಸ, ಪ್ರಮುಖರಾದ ಯೂಸುಫ್, ಸಭಾದ್, ಅಯುಬ್, ಸುಮಯ್ಯ ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.