ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳಾ ಸಹಾಯಕಿಯೊಬ್ಬಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳಾ ಸಹಾಯಕಿಯೊಬ್ಬಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಿಹಾರ ಮೂಲದ ಚಾಂದಿನಿ ಬಂಧಿತಳಾಗಿದ್ದು, ಆರೋಪಿಯಿಂದ 236 ಗ್ರಾಂ ಚಿನ್ನಾಭರಣ, 9.25 ಗ್ರಾಂ ಪ್ಲಾಟಿನಂ ಹಾಗೂ 118 ಗ್ರಾಂ ಬೆಳ್ಳಿ ವಸ್ತುಗಳು ಸೇರಿ 31 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಮ್ಮನಹಳ್ಳಿಯ ಫಾತಿಮಾ ಎಂಬುವರ 80 ವರ್ಷದ ತಾಯಿ ಆರೈಕೆಗೆ ಚಾಂದಿನಿಯನ್ನು ಅವರು ನೇಮಿಸಿಕೊಂಡಿದ್ದರು. ಆದರೆ ಮನೆ ಮಾಲಿಕರಿಗೆ ತಿಳಿಯದಂತೆ ಆಕೆ ಕಳವು ಮಾಡಿದ್ದಳು. ಇತ್ತೀಚೆಗೆ ಮನೆಯಲ್ಲಿ ಆಭರಣ ಕಾಣದೆ ಹೋದಾಗ ಬಾಣಸವಾಡಿ ಠಾಣೆಗೆ ಫಾತಿಮಾ ದೂರು ನೀಡಿದ್ದರು. ಅದರನ್ವಯ ಚಾಂದಿನಿ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಮ್ಮನಹಳ್ಳಿಯ ಫಾತಿಮಾ ಅವರು, ತಮ್ಮ ಕುಟುಂಬದ ಜತೆ ವಿದೇಶದಲ್ಲಿ ನೆಲೆಸಿದ್ದಾರೆ. ಕಮ್ಮನಹಳ್ಳಿಯಲ್ಲಿರುವ ವೃದ್ಧ ತಾಯಿ ನೋಡಿಕೊಳ್ಳಲು ಚಾಂದಿನಿಯನ್ನು ಅವರು ನೇಮಿಸಿಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಅವರ ಮನೆಯಲ್ಲಿ ಚಾಂದಿನಿ ಕೆಲಸ ಮಾಡುತ್ತಿದ್ದಳು. ಆಗ ಫಾತಿಮಾ ಅವರ ತಾಯಿಗೆ ತಿಳಿಯದಂತೆ ಆಕೆ ಆಭರಣ ಕಳವು ಮಾಡಿದ್ದಳು. ಅಲ್ಲದೆ ವೃದ್ಧೆಯ ಎಟಿಎಂ ಕಾರ್ಡ್ ಬಳಸಿ ಆಗಾಗ ಹಣವನ್ನು ಡ್ರಾ ಮಾಡಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
