ಹೆಣ್ಣು ಭ್ರೂಣಹತ್ಯೆ ಇನ್ನೂ ಜೀವಂತ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Feb 11 2025, 12:45 AM IST

ಹೆಣ್ಣು ಭ್ರೂಣಹತ್ಯೆ ಇನ್ನೂ ಜೀವಂತ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಿಂದ ತಾಲೂಕಿಗೆ ಕೆಟ್ಟಹೆಸರು ಬಂದಿದೆ. ಇಷ್ಟಾದರೂ ಇನ್ನೂ ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಇಂತಹ ಪ್ರಕರಣಗಳ ಕಡಿವಾಣ ಹಾಕುವ ಕೆಲಸ ತುರ್ತಾಗಿ ಆಗಬೇಕು. ಆರೋಗ್ಯಾಧಿಕಾರಿಗಳು, ಪೊಲೀಸರು ಜಂಟಿಯಾಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿಗೆ ಕಳಂಕ ತಂದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಇನ್ನೂ ನಡೆಯುತ್ತಲೇ ಇವೆ. ಈ ಬಗ್ಗೆ ಸಾರ್ವಜನಿಕರಿಂದ ನಿತ್ಯ ನನಗೆ ದೂರುಗಳು ಕೇಳಿಬರುತ್ತಿದೆ. ಆರೋಗ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ಪತ್ತೆ ಹಚ್ಚಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಾಕೀತು ಮಾಡಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ.ಸಿ.ಎ. ಅರವಿಂದ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಉಮೇಶ್ ಅವರಿಗೆ ಭ್ರೂಣಹತ್ಯೆ ತಡೆಗೆ ಕ್ರಮ ವಹಿಸುವಂತೆ ಸೂಚಿಸಿದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಿಂದ ತಾಲೂಕಿಗೆ ಕೆಟ್ಟಹೆಸರು ಬಂದಿದೆ. ಇಷ್ಟಾದರೂ ಇನ್ನೂ ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಇಂತಹ ಪ್ರಕರಣಗಳ ಕಡಿವಾಣ ಹಾಕುವ ಕೆಲಸ ತುರ್ತಾಗಿ ಆಗಬೇಕು. ಆರೋಗ್ಯಾಧಿಕಾರಿಗಳು, ಪೊಲೀಸರು ಜಂಟಿಯಾಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಬೇಕು. ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳ ಬಗ್ಗೆಯೂ ಕ್ರಮ ವಹಿಸುವುದು ಹಾಗೂ ಒಂದೇ ಪರವನಾಗಿ ಪಡೆದು ಎರಡು ಸ್ಕ್ಯಾನಿಂಗ್‌ ಯಂತ್ರ ಇಟ್ಟುಕೊಂಡಿರುವವರನ್ನೂ ಪತ್ತೆ ಹಚ್ಚುವ ಕೆಲಸವಾಗಬೇಕು. ಗ್ರಾಮಾಂತರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಸಹಾಯದಿಂದ ಭ್ರೂಣಹತ್ಯೆ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ವಹಿಸುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಹೆಣ್ಣುಭ್ರೂಣಹತ್ಯೆ ಪ್ರಕರಣ ಪತ್ತೆಗೆ ಕ್ರಮ ವಹಿಸಲಾಗಿದೆ. ನೋಂದಣಿ ಮಾಡಿಸಿಕೊಳ್ಳದೆ ನಡೆಸುತ್ತಿದ್ದ ಕ್ಲಿನಿಕ್‌ಗಳಿಗೆ ನೋಂದಣಿ ಮಾಡಿಸಲಾಗಿದೆ. ಗರ್ಭಿಣಿಯಾದ ಕೆಲವು ಮಹಿಳೆಯರು 4 ತಿಂಗಳ ಬಳಿಕ ನಮ್ಮ ಬಳಿ ತಾಯಿ ಕಾರ್ಡ್‌ಗಾಗಿ ಬರುತ್ತಿದ್ದಾರೆ. ಇದರಿಂದ ನಮಗೆ ಸ್ವಲ್ಪ ಗೊಂದಲವಾಗುತ್ತಿದೆ ಎಂದರು.

ತಾಲೂಕಿನಲ್ಲಿ ಮೂರು ಕ್ಲಿನಿಕ್, ನಸಿಂಗ್ ಹೋಂಗಳಲ್ಲಿ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭ್ರೂಣ ಲಿಂಗ ಪತ್ತೆಗೆ ಪೊಲೀಸರ ಜತೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಒತ್ತುವರಿ ಜಮೀನು ಗುರುತಿಸಿ:

ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರದ ಜಮೀನು, ಆಸ್ತಿಯನ್ನು ಪತ್ತೆಮಾಡಿ ರಕ್ಷಣೆಗೆ ಪುರಸಭೆ, ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಗುರುತಿಸಿ ವಶಕ್ಕೆ ಪಡೆದುಕೊಳ್ಳಬೇಕು. ಪಟ್ಟಣದಲ್ಲಿ ಬಹುತೇಕ ಬಡಾವಣೆಗಳಲ್ಲಿ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ರಕ್ಷಣೆ ಜವಾಬ್ದಾರಿ ಪುರಸಭೆ ಮುಖ್ಯಾಧಿಕಾರಿಗಳದ್ದಾಗಿದೆ ಎಂದರು.

ಜಾಗ ಗುರುತಿಸಿ ವಶಕ್ಕೆಪಡೆದು ಆ ಜಾಗದಲ್ಲಿ ಬೋರ್ಡ್ ಹಾಕಬೇಕು. ಈ ಕೆಲಸ ಮುಂದಿನ ಸಭೆಯೊಳಗೆ ಆಗಬೇಕು. ಆಶ್ರಯ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು. ಪುರಸಭೆ ವ್ಯಾಪ್ತಿಯಲ್ಲಿ ಇರುವ ಬಡಾವಣೆಗಳಿಗೆ ನಾಮಫಲಕದ ಬೋರ್ಡ್ ಅಳವಡಿಕೆ ಮಾಡಲು ಕ್ರಮ ವಹಿಸುವಂತೆ ತಾಕೀತು ಮಾಡಿದರು.

ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ:

ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮವಹಿಸಬೇಕು, ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ಮನವೊಲಿಸಿ, ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವಂತೆ ಮಾಡಬೇಕು, ಹತ್ತಿರ ಶಾಲೆಗಳನ್ನು ವಿಲೀನಗೊಳಿಸಿದರೆ ಮಕ್ಕಳಿಗೆ ವಿಷಯವಾರು ಪಾಠ ಮಾಡಲು ಅನುಕೂಲವಾಗುತ್ತದೆ. ಮಕ್ಕಳು ಶಾಲೆಗೆ ಹೋಗಿಬರಲು ವಾಹನದ ವ್ಯವಸ್ಥೆಯನ್ನು ಶಾಲೆಯ ಅಭಿವೃದ್ದಿ ಸಮಿತಿ ಹಾಗೂ ಗ್ರಾಪಂನಿಂದ ನೀಡುವಂತೆ ಕ್ರಮವಹಿಸಿದರೆ ಸರ್ಕಾರಿ ಶಾಲೆಯ ಉನ್ನತೀಕರಣಗೊಳ್ಳುತ್ತವೆ. ಜತೆಗೆ ಶಾಲೆಗಳಲ್ಲಿ ಎಲ್ ಕೆಜಿ -ಯುಕೆಜಿ ಯಿಂದಲೇ ಆಂಗ್ಲ, ಕನ್ನಡ ಮಾಧ್ಯಮಗಳಲ್ಲಿ ಶಿಕ್ಷಣ ನೀಡಲು ಕ್ರಮವಹಿಸಿ ಎಂದು ಬಿಇಒ ರವಿಕುಮಾರ್ ಅವರಿಗೆ ತಿಳಿಸಿದರು.

ಕೃಷಿ ಇಲಾಖೆ ಸೌಲಭ್ಯಗಳ ಮಾಹಿತಿ ಕೊಡಿ:

ಕೃಷಿ ಇಲಾಖೆಯಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಮಾಹಿತಿ ನೀಡಿ, ಹೋಬಳಿಗೆ ಒಂದು ಗ್ರಾಮವನ್ನು ಕೃಷಿಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಅನುದಾನವನ್ನು ಬಜೆಟ್‌ನಲ್ಲಿ ನೀಡುವಂತೆ ಮನವಿ ಮಾಡಲಾಗಿದೆ. ಜತೆಗೆ ಕಬ್ಬು, ಭತ್ತ ಕಟಾವು ಮಾಡಲು ಕಾರ್ಮಿಕರ ಕೊರತೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಮತ್ತು ವಿಸಿ ಫಾರಂ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸಣ್ಣಸಣ್ಣ ಯಂತ್ರಗಳನ್ನು ಅನುಕೂಲ ಮಾಡಿಕೊಡಿ ಎಂದು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ಅವರಿಹೆ ಸಲಹೆ ನೀಡಿದರು.

ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಅಶೋಕ್, ತಾಪಂ ಇಒ ಲೋಕೇಶಮೂರ್ತಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಎಚ್.ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.