ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಹೆಣ್ಣನ್ನು ಭ್ರೂಣದಲ್ಲೇ ಚಿವುಟಿ ಹಾಕುವುದು ಒಂದೆಡೆಯಾದರೆ, ಮಕ್ಕಳು ಆನ್ ಲೈನ್ ಗೇಮಿಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಆತಂಕಕ್ಕೆ ಕಾರಣವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂದರಾ ಭೂಪತಿ ಗುರುವಾರ ಎಚ್ಚರಿಸಿದರು.ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ. ಆದರೆ, ಮನೆ ದೀಪ ಬೆಳಗಬೇಕಾದ ಹೆಣ್ಣನ್ನು ಪ್ರಪಂಚನೇ ನೋಡದ ರೀತಿಯಲ್ಲಿ ಹತ್ಯೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣು ಭ್ರೂಣ ಹತ್ಯೆಯಿಂದ ಮಗು ಮತ್ತು ತಾಯಿ ಹಕ್ಕು ಉಲ್ಲಂಘನೆಯಾಗುತ್ತಿದೆ. ಸ್ತ್ರೀರೋಗ ತಜ್ಞರು ಹಾಗೂ ವಿಕರಣ ಶಾಸ್ತ್ರಜ್ಞರು ಹಣದ ಆಸೆಗಾಗಿ ಹೆಣ್ಣು ಭ್ರೂಣ ಹತ್ಯೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರ ನಿಗ್ರಹಕ್ಕೆ ಸರ್ಕಾರ 1991ರಲ್ಲಿ ಕಾಯ್ದೆ ಜಾರಿಗೆ ತಂದಿದ್ದ ರೂ ಸಹ ಕೃತ್ಯದಲ್ಲಿ ತೊಡಗಿದ ವೈದ್ಯರುಗಳಿಗೆ ಶಿಕ್ಷೆಯಾದ ಯಾವುದೇ ಉದಾಹರಣೆಗಳು ಇಲ್ಲ. ಸರ್ಕಾರ ಈ ಬಗ್ಗೆ ಎಚ್ಚೆತ್ತು ಕಾಯ್ದೆಗಳನ್ನು ಮತ್ತಷ್ಟು ಬಿಗಿಗೊಳಿಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.ಈ ಹಿಂದೆ ಸಮಾಜದಲ್ಲಿ ಕುಡಿಯುವ ಚಟದಿಂದ ಮತ್ತು ಜೂಜಿನಿಂದ ಸಂಸಾರಗಳು ಹಾಳಾಗುತ್ತಿವೆ ಎಂದು ಹೇಳುತಿದ್ದೆವು. ಈಗ ಆನ್ ಲೈನ್ ಗೇಮ್ ನಿಂದ ಹಣ ಕಳೆದುಕೊಂಡ ಯುವ ಸಮೂಹ ಬೀದಿಗೆ ಬಿದ್ದು ಇಡೀ ಸಂಸಾರ ಆತ್ಮಹತ್ಯೆ ಹಿಡಿಯುವ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ವಿರುದ್ಧ ಸರ್ಕಾರ ಮತ್ತು ಸಮಾಜ ಸೇವಾ ಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಕುಟುಂಬ ಮತ್ತು ಆಡಳಿತ ನಿರ್ವಹಣೆಯಲ್ಲಿ ಮುಂದಿದ್ದಾರೆ. ಸಮಾಜದ ಶುದ್ದಿಕರಣದಲ್ಲೂ ಮಹಿಳೆಯರ ಪ್ರಮುಖ ಪಾತ್ರವಿದೆ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.
ಇದೇ ವೇಳೆ ಮಹಿಳಾ ದಿನಾಚರಣೆ ಅಂಗವಾಗಿ ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತ್ಯ ಕ್ಷೇತ್ರ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಎಸ್.ಎನ್.ಗಾಯತ್ರಿ, ಡಾ.ಎಸ್.ಸಿ.ಮಂಗಳ, ರಂಗಭೂಮಿಯಿಂದ ಎ.ಎಸ್.ಜಯಲಕ್ಷ್ಮಿ ಗೌಡಹಳ್ಳಿ, ಸಂಘಟನಾ ಕ್ಷೇತ್ರದಿಂದ ಸೌಭಾಗ್ಯ ಮಹಾದೇವ್, ಶಿಕ್ಷಣ ಕ್ಷೇತ್ರದಿಂದ ಕೃಷ್ಣವೇಣಿ, ಕೆ.ಪಿ.ಸುಜಾತ, ಜಾನಪದ ಕ್ಷೇತ್ರದಿಂದ ರಾಜಮಣಿ ಕಲ್ಲಾರೆಪುರ, ಸಮಾಜ ಸೇವೆಯಿಂದ ಮಮತಾ ತಿಮ್ಮೇಗೌಡರನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿ.ಹರ್ಷ ಪಣ್ಣೆದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಟಿ.ನಾರಾಯಣ, ಕಸಾಪ ಗೌರವ ಕಾರ್ಯದರ್ಶಿ ಮಹದೇವಸ್ವಾಮಿ, ಉಪಾಧ್ಯಕ್ಷ ಈರಯ್ಯ, ಗೌರವಕೋಶಾಧ್ಯಕ್ಷ ಬಿ.ಎಂ. ಅಪ್ಪಾಜಪ್ಪ ಹಾಗೂ ಜಿಲ್ಲಾ ಕಸಾಪ ಮಹಿಳಾ ಪದಾಧಿಕಾರಿಗಳು ಭಾಗವಹಿಸಿದ್ದರು.