ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರಸ್ತುತ ನಾವು ಮಹಿಳೆಯರಾಗಿ ಚನ್ನಾಗಿ ಓದಿದ್ದೇವೆ, ಆರ್ಥಿಕವಾಗಿ ಸಬಲರಾಗಿದ್ದೇವೆ. ಆದರೂ ಸಿಗಬೇಕಾದ ಗೌರವ ಇನ್ನು ಸಂಪೂರ್ಣವಾಗಿ ಸಿಕ್ಕಿಲ್ಲ. ಹೀಗಿರುವಾಗ ಸಮಾನತೆ ದೂರದ ಮಾತು. ಈ ನಡುವೆಯೂ ಹೆಣ್ಣಿನ ವ್ಯಕ್ತಿತ್ವ ಪ್ರತಿಪಾದಿಸುವ ವ್ಯಕ್ತಿತ್ವದವರು ನಮ್ಮ ಜೊತೆ ಇರುವುದೇ ಹೆಮ್ಮೆಯ ವಿಷಯ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಹೇಳಿದರು.ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗಸಿರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕಗಳ ಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಷ್ತಾಕ್ ರವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರ ಜೊತೆ ನಾವು ಕುಳಿತಿದ್ದೇವೆ ಎಂದರೆ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ರಂಗಸಿರಿಯ ಎಲ್ಲ ಸದಸ್ಯರು ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಪ್ರತಿಯೊಬ್ಬ ಮಹಿಳೆಯಲ್ಲೂ ಹೋರಾಟಗಾರ್ತಿ ಇರುತ್ತಾಳೆ. ಭಾನು ಮುಷ್ತಾಕ್ ರಲ್ಲಿ ನನಗೆ ನಾಟಿರುವುದು ಅವರ ಹೋರಾಟದ ಬದುಕು, ಅವರ ಕಥೆ, ಪಾತ್ರವನ್ನು ನೋಡುತ್ತಾ ಹೋದರೆ ಅವರ ವೇದನೆ, ಹೋರಾಟಗಳು ತಿಳಿಯುತ್ತ ಹೋಗುತ್ತದೆ ಎಂದರು. ಅವರ ಬರಹ ನಮಗೆ ಕಥೆ ಎನ್ನಿಸುವುದಿಲ್ಲ, ಜೀವಂತ ವ್ಯಕ್ತಿತ್ವ ಎನ್ನಿಸಿ ಬಿಡುತ್ತದೆ. ಓದುತ್ತಾ ಹೋದರೆ ಅದರಲ್ಲಿ ನಮ್ಮದು ಒಂದು ಪಾತ್ರ ಇದೆ ಎನ್ನಿಸುತ್ತದೆ. ಒಬ್ಬ ಬರಹಗಾರ್ತಿಯಾಗಿ, ಪತ್ರಿಕೋದ್ಯಮಿಯಾಗಿ ಹಾಗೂ ವಕೀಲರಾಗಿ ಸೇವೆ ನೀಡುತ್ತಿದ್ದಾರೆ. ನಾವು ಮಹಿಳೆಯರಾಗಿ ಚನ್ನಾಗಿ ಓದಿದ್ದೇವೆ, ಆರ್ಥಿಕವಾಗಿ ಸಬಲರಾಗಿದ್ದೇವೆ. ಎಲ್ಲಾ ಪಡೆದುಬಿಟ್ಟಿದ್ದೇವೆ ಎನ್ನುವಂಥದ್ದು ಇಲ್ಲ. ಈಗಲು ಹೇಳುತ್ತೇವೆ, ಮಹಿಳೆಗೆ ಸಿಗಬೇಕಾದ ಗೌರವ ಈ ಸಮಾಜದಲ್ಲಿ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ, ಸಮಾನತೆ ದೂರದ ಮಾತು. ಅವಕಾಶ ಕೇಳಲೇ ಬೇಡಿ ಎಂದು ಬೇಸರ ವ್ಯಕ್ತಪಡಿಸಿದರು.
ಈ ಎಲ್ಲಾ ಕೊರತೆಗಳ ನಡುವೆಯೂ ಸಹ ಹೆಣ್ಣನ್ನು, ಹೆಣ್ಣಿನ ವ್ಯಕ್ತಿತ್ವವನ್ನು ಪ್ರತಿಪಾದಿಸುವ ಒಂದು ಉತ್ತಮ ವ್ಯಕ್ತಿತ್ವ ನಮ್ಮ ಜೊತೆಗೇ ಇದ್ದಾರೆ ಎನ್ನುವುದೇ ಒಂದು ಹೆಮ್ಮೆಯ ವಿಷಯ ಎಂದು ತಿಳಿಸಿ, ಎಲ್ಲರ ಪರವಾಗಿ ಭಾನು ಮುಷ್ತಾಕ್ ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಯಾಮೃಗ ಎಂಬ ನಾಟಕವನ್ನು ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನ ಮಾಡಿದ್ದು, ಇನ್ನೊಂದು ಎದೆಯ ಹಣತೆ ನಾಟಕವನ್ನು ಡಾ. ಎಂ. ಗಣೇಶ್ ಹೆಗ್ಗೋಡ್ ನಿರ್ದೇಶನ ಮಾಡಿದ್ದು, ಎರಡೂ ನಾಟಕಗಳು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಗಮನಸೆಳೆದವು.
ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಮೋಹನ್ ಹೆಮ್ಮಿಗೆ, ಅಮೋಘ ಸುದ್ದಿ ವಾಹಿನಿ ಮುಖ್ಯಸ್ಥರು ಕೆ.ಪಿ.ಎಸ್. ಪ್ರಮೋದ್, ಅಡಿಷನಲ್ ಎಸ್ಪಿ ವೆಂಕಟೇಶ್ ನಾಯ್ಡು, ರಂಗಸಿರಿ ಕಾರ್ಯದರ್ಶಿ ಶಾಡ್ರಾಕ್, ರಂಗಸಿರಿ ಹಿರಿಯ ಕಲಾವಿದ ಜವರಯ್ಯ, ಖಜಾಂಚಿ ಡಿ.ಎಸ್. ಲೋಕೇಶ್, ಅಧ್ಯಕ್ಷ ರಂಗಸ್ವಾಮಿ, ಇತರರು ಉಪಸ್ಥಿತರಿದ್ದರು.ಜಿಲ್ಲಾ ಕಸಾಪ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಸ್ವಾಗತಿಸಿದರು. ಲಕ್ಷ್ಮೀನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.