ಕ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಮಹಿಳಾ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಕಾರವಾರ: ನಗರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಮಹಿಳಾ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಕುಮಟಾ ಮೂಲದ ಗೋಪಾಲ ಗೌಡ ಎಂಬುವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ತುರ್ತಾಗಿ ''''''''ಎ ಪಾಸಿಟಿವ್'''''''' ರಕ್ತದ ಅವಶ್ಯಕತೆ ಎದುರಾಗಿತ್ತು.
ರಕ್ತಕ್ಕಾಗಿ ರೋಗಿಯ ಸಂಬಂಧಿಕರು ಪರದಾಡುತ್ತಿದ್ದಾಗ, ''''''''ಬ್ಲಡ್ ಡೋನರ್ಸ್ ಕಾರವಾರ''''''''ದ ವಿನಾಯಕ ನಾಯ್ಕ ಚೆಂಡಿಯಾ ಅವರನ್ನು ಸಂಪರ್ಕಿಸಿದ್ದು, ಅವರು ತಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ರಕ್ತದಾನಿಗಳಿಗೆ ಮನವಿ ಮಾಡಿದ್ದರು. ಈ ಕರೆಗೆ ತಕ್ಷಣ ಸ್ಪಂದಿಸಿದ ಶಿರಸಿ ಮೂಲದ, ಪ್ರಸ್ತುತ ಕಾರವಾರದ ಲೋಕಾಯುಕ್ತ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ದಿವ್ಯಜ್ಯೋತಿ ದಯಾನಂದ ಕಾನಡೆ ಅವರು ರಕ್ತದಾನ ಕೇಂದ್ರಕ್ಕೆ ತೆರಳಿ ರಕ್ತದಾನ ಮಾಡಿ, ರೋಗಿಯ ಜೀವ ಉಳಿಸಲು ನೆರವಾಗಿದ್ದಾರೆ.ರಕ್ತದಾನ ಮಾಡಿದ ದಿವ್ಯಜ್ಯೋತಿ ಅವರ ಕಾರ್ಯ ಇತರರಿಗೂ ಮಾದರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಾರವಾರದಲ್ಲಿ ಮಹಿಳೆಯರೂ ರಕ್ತದಾನಕ್ಕೆ ಮುಂದಾಗುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಸಕಾಲಕ್ಕೆ ಸ್ಪಂದಿಸಿದ ದಿವ್ಯಜ್ಯೋತಿ ಅವರಿಗೆ ಬ್ಲಡ್ ಡೋನರ್ಸ್ ಗ್ರೂಪ್‌ನ ವಿನಾಯಕ ನಾಯ್ಕ, ಎಎಸ್‌ಐ ಅಮೂಲ್ ನಾಯ್ಕ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.