ಆಶ್ರಯನಗರ ರಸ್ತೆಗೆ ಬೇಲಿ: ಗ್ರಾಮಸ್ಥರ ಆಕ್ರೋಶ

| Published : Nov 20 2024, 12:32 AM IST

ಸಾರಾಂಶ

ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಗಡಿಭಾಗದ ಹೊನ್ನಿಗನಹಳ್ಳಿಯ ಆಶ್ರಯ ವಸತಿ ಗ್ರಾಮದಲ್ಲಿ ವಾಸಿಸುತ್ತಿರುವ 3೦ ಕ್ಕೂ ಹೆಚ್ಚು ಕುಟುಂಬಗಳು ಓಡಾಡುತ್ತಿದ್ದ ರಸ್ತೆಯನ್ನು ಸ್ಥಳೀಯರು ಬೇಲಿ ನಿರ್ಮಿಸಿಕೊಂಡಿದ್ದು, ಇದರಿಂದ ಗ್ರಾಮಸ್ಥರು ಗ್ರಾಮದಿಂದ ಹೊರ ಬರಲಾಗದೆ ದಿಗ್ಬಂಧನದಲ್ಲಿದ್ದಾರೆ.

ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಗಡಿಭಾಗದ ಹೊನ್ನಿಗನಹಳ್ಳಿಯ ಆಶ್ರಯ ವಸತಿ ಗ್ರಾಮದಲ್ಲಿ ವಾಸಿಸುತ್ತಿರುವ 3೦ ಕ್ಕೂ ಹೆಚ್ಚು ಕುಟುಂಬಗಳು ಓಡಾಡುತ್ತಿದ್ದ ರಸ್ತೆಯನ್ನು ಸ್ಥಳೀಯರು ಬೇಲಿ ನಿರ್ಮಿಸಿಕೊಂಡಿದ್ದು, ಇದರಿಂದ ಗ್ರಾಮಸ್ಥರು ಗ್ರಾಮದಿಂದ ಹೊರ ಬರಲಾಗದೆ ದಿಗ್ಬಂಧನದಲ್ಲಿದ್ದಾರೆ.

ಹೊನ್ನಿಗನಹಳ್ಳಿ ಸಮೀಪದ ಹೆದ್ದಾರಿ ಪಕ್ಕದಲ್ಲೇ 1996ರಲ್ಲಿ ಆಶ್ರಯ ಯೋಜನೆಯಡಿ ರೈತರಿಂದ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಿದ್ದ ಜಾಗಕ್ಕೆ ಗ್ರಾಮಸ್ಥರ ಓಡಾಟಕ್ಕೆ 20 ಅಡಿ ರಸ್ತೆ ಕಾಯ್ದಿರಿಸಲಾಗಿತ್ತು. ಇದುವರೆಗೂ ಅದೇ ರಸ್ತೆಯಲ್ಲೇ ಓಡಾಡುತ್ತಿದ್ದರು. ಆದರೆ ರಸ್ತೆ ಅಕ್ಕಪಕ್ಕದಲ್ಲಿರುವ ರೈತರು ತಮ್ಮ ಆಸ್ತಿ ಸರ್ವೇ ಮಾಡಿಸಿಕೊಂಡು ರಸ್ತೆ ಜಾಗವೂ ನಮಗೆ ಸೇರಬೇಕು ಎಂದು ಆಶ್ರಯ ಗ್ರಾಮಕ್ಕೆ ಇದ್ದ ರಸ್ತೆ ಜಾಗಕ್ಕೆ ಬೇಲಿ ಹಾಕಿಕೊಂಡಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಓಡಾಡಲು ಬೇರೆ ಯಾವುದೇ ರಸ್ತೆ ಇಲ್ಲ. ಸಮಸ್ಯೆ ಬಗೆಹರಿಸಲು ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ನಮಗೆ ಓಡಾಡಲು ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಗ್ರಾಮದ ಮಹಿಳೆಯರಾದ ಪ್ರೇಮ, ಚೈತ್ರ, ವಿನೋದ, ವೆಂಕಟಮ್ಮ, ಕಲಾವತಿ, ರೂಪ, ರಾಧ, ಶಿವರಾಂ, ನಾಗಮ್ಮ, ಭಾಗ್ಯಮ್ಮ, ನಾಗರತ್ನಮ್ಮ, ಚನ್ನಬಸವ, ಕರಿಯಪ್ಪ, ಸಿದ್ದರಾಜು ಉಪಸ್ಥಿತರಿದ್ದರು.

ಕೋಟ್‌.........

ಸರ್ವೆ ನಂ. 128ರಲ್ಲಿ ಆಶ್ರಯ ನಗರಕ್ಕೆ ಎರಡು ಎಕರೆ ಜಮೀನು ಖರೀದಿಸಿ ರಸ್ತೆಗೆ 20 ಅಡಿ ಜಾಗ ಕಾಯ್ದಿರಿಸಲಾಗಿದೆ. ಆದರೆ ಅಕ್ಕ ಪಕ್ಕದ ಜಮೀನು ಖರೀದಿಸಿರುವ ರೈತರು ರಸ್ತೆಗೆ ಮೀಸಲಾಗಿದ್ದ ಜಾಗವನ್ನು ಪೋಡಿ ಮಾಡಿಸಿಕೊಂಡಿದ್ದಾರೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಪೋಡಿಯನ್ನು ರದ್ದುಪಡಿಸವಂತೆ ತಹಸೀಲ್ದಾರ್ ಮತ್ತು ಡಿಡಿಎಲ್‌ಆರ್ ಗೆ ಪತ್ರ ಬರೆದು ಮನವಿ ಮಾಡಿದ್ದು ಇದುವರೆಗೂ ಪೋಡಿ ರದ್ದಾಗದ ಕಾರಣ ಸಮಸ್ಯೆ ಬಗೆಹರಿದಿಲ್ಲ.

-ಮಹೇಶ್, ಪಿಡಿಒ, ಹೊನ್ನಿಗನಹಳ್ಳಿ ಗ್ರಾಪಂ

ಕೋಟ್‌.........

ರಸ್ತೆ ಬಂದ್‌ ಮಾಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಯಾವುದೇ ಮುಖ್ಯ ರಸ್ತೆಯನ್ನು ಮುಚ್ಚುವಂತಿಲ್ಲ ಒಂದು ವೇಳೆ ಅದು ಖಾಸಗಿ ಜಾಗವಾಗಿದ್ದರೂ ತಾತ್ಕಾಲಿಕವಾಗಿ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು. ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು.

-ಬೈರಪ್ಪ, ಇಒ, ತಾಪಂ, ಕನಕಪುರ

ಕೆ ಕೆ ಪಿ ಸುದ್ದಿ 1(2):

ಹೊನ್ನಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಆಶ್ರಯ ನಗರಕ್ಕೆ ಮುಚ್ಚಿರುವ ರಸ್ತೆ ಓಡಾಟಕ್ಕೆ ತೆರವುಗೊಳಿಸಿಕೊಡುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು.

ಕೆ ಕೆ ಪಿ ಸುದ್ದಿ 01(2):

ಆಶ್ರಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸ್ಥಳೀಯರು ಬೇಲಿ ಹಾಕಿಕೊಂಡಿರುವುದು.