ಸಾರಾಂಶ
ಮಂಡ್ಯ : ಫಂಗಲ್ ಚಂಡಮಾರುತದ ಎಫೆಕ್ಟ್ ಮಂಡ್ಯ ಜಿಲ್ಲೆಯ ಮೇಲೂ ಬಿದ್ದಿದೆ. ಜಿಲ್ಲಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಕೊಂಚವೂ ಕಾಲಾವಕಾಶ ನೀಡದೆ ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಸಾರ್ವಜನಿಕರ ದಿನನಿತ್ಯದ ಚಟುವಟಿಕೆಗಳಿಗೆ ತೀವ್ರ ಅಡ್ಡಿ ಉಂಟುಮಾಡಿತು.
ಭಾನುವಾರ ರಾತ್ರಿಯಿಂದಲೇ ಮಳೆ ಆರಂಭಗೊಂಡಿತ್ತು. ಜಿಟಿ ಜಿಟಿ ಮಳೆ ಬೆಳಗ್ಗೆಯಾದರೂ ಮುಂದುವರೆದಿತ್ತು. ಆ ನಂತರ ಕೊಂಚ ಬಿರುಸಾದ ಮಳೆ ನಿರಂತರವಾಗಿ ಸುರಿಯಲಾರಂಭಿಸಿತು. ಮಳೆಯಿಂದಾಗಿ ಜಿಲ್ಲಾಡಳಿತ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಸೀಮಿತವಾಗಿ ರಜೆ ಘೋಷಿಸಿತು. ಬೆಳಗ್ಗೆಯೇ ಆದೇಶ ಹೊರಡಿಸಿದ್ದರೂ ಕೆಲವರು ಅದನ್ನು ಗಮನಿಸದೆ ಶಾಲೆಗಳಿಗೆ ಮಕ್ಕಳನ್ನು ಮಳೆಯ ನಡುವೆಯೇ ಕರೆದೊಯ್ದು ಮತ್ತೆ ಮಳೆಯಲ್ಲೇ ವಾಪಸ್ ಮನೆಗೆ ಕರೆತಂದು ಬಿಟ್ಟ ಪ್ರಸಂಗಗಳೂ ಜರುಗಿದವು.ಪದವಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಇತರೆ ಕಾಲೇಜುಗಳು ತೆರೆದಿದ್ದರಿಂದ ವಿದ್ಯಾರ್ಥಿಗಳು ಮಳೆಯ ನಡುವೆಯೇ ತರಗತಿಗಳಿಗೆ ತೆರಳುತ್ತಿದ್ದುದು ಕಂಡುಬಂದಿತು. ಬಸ್‌ಗಳಿಗಾಗಿ ನಿಲ್ದಾಣದ ಬಳಿ ಛತ್ರಿಗಳನ್ನಿಡಿದು ನಿಂತಿದ್ದರು.
ಮಳೆ ಸಾರ್ವಜನಿಕರನ್ನು ಮನೆಯಿಂದ ಹೊರಗೆ ಕಾಲು ಹಾಕುವುದಕ್ಕೂ ಸಾಧ್ಯವಾಗದಂತೆ ತಡೆ ಹಿಡಿದಿತ್ತು. ತುರ್ತು ಕೆಲಸವಿದ್ದವರು ವಿಧಿಯಿಲ್ಲದೆ ಛತ್ರಿಯನ್ನು ಆಶ್ರಯಿಸಿಕೊಂಡು ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿದ್ದರು. ದ್ವಿಚಕ್ರ ವಾಹನಗಳಲ್ಲಿ ತೆರಳುವವರ ಸಂಖ್ಯೆ ಕಡಿಮೆ ಇದ್ದು, ಬಹುತೇಕರು ಕಾರುಗಳನ್ನು ಆಶ್ರಯಿಸಿ ನಿತ್ಯದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರು.
ಆಟೋಗಳಿಗೆ ಫುಲ್ ಡಿಮ್ಯಾಂಡ್:
ಮಳೆಯಿಂದಾಗಿ ಆಟೋಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ತುರ್ತು ಕೆಲಸವಿದ್ದವರು ಸಂಚಾರಕ್ಕೆ ಆಟೋಗಳನ್ನೇ ಅವಲಂಬಿಸಿದ್ದರು. ಹೀಗಾಗಿ ಸಾಮಾನ್ಯ ದಿನಗಳಿಗಿಂತ ಆಟೋ ಚಾಲಕರು ಹೆಚ್ಚು ಬ್ಯುಸಿಯಾಗಿದ್ದರು. ಕಲೆಕ್ಷನ್ ಕೂಡ ಜೋರಾಗಿಯೇ ಇದ್ದುದರಿಂದ ಖುಷಿಯಾಗಿದ್ದರು.
ಮಳೆಯಿಂದಾಗಿ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುತ್ತಿದ್ದ ದರಕ್ಕಿಂತಲೂ 10 ರಿಂದ 20 ರು. ಹೆಚ್ಚು ಪಡೆಯುತ್ತಿರುವುದು ಕಂಡುಬಂದಿತು. ಜನರೂ ಕೂಡ ವಿಧಿಯಿಲ್ಲದೆ ಹೆಚ್ಚಿನ ದರ ಕೊಟ್ಟು ಸಂಚರಿಸುವುದು ಅನಿವಾರ್ಯವಾಗಿತ್ತು. ಮಳೆಯಿಂದಾಗಿ ಹಲವರು ಮನೆಯಲ್ಲೇ ಉಳಿದಿದ್ದರು. ಕಚೇರಿ ವ್ಯವಹಾರಗಳು, ಹೊರ ಊರುಗಳಿಗೆ ತೆರಳುವುದನ್ನೂ ಮುಂದೂಡಿದ್ದರು.
ಹಲವು ರಸ್ತೆಗಳು ಜಲಾವೃತ:
ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಹೊಳಲು ವೃತ್ತ, ರೈಲ್ವೆ ಕೆಳಸೇತುವೆ ರಸ್ತೆ, ಸೆಂಟ್ ಜಾನ್ ಸ್ಕೂಲ್ ಸಮೀಪ, ಖಾಸಗಿ ಬಸ್ ನಿಲ್ದಾಣದ ಎದುರಿನ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆಗಳು ಜಲಾವೃತಗೊಂಡಿದ್ದವು. ನೀರಿನ ನಡುವೆಯೇ ಸಾರ್ವಜನಿಕರು ಮತ್ತು ವಾಹನಗಳ ಸಂಚಾರ ಮುಂದುವರೆದಿತ್ತು.
ವ್ಯಾಪಾರದ ಮೇಲೆ ಪರಿಣಾಮ:
ಮಳೆಯ ಪರಿಣಾಮ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪಾರದ ಮೇಲೆ ಪರಿಣಾಮ ಬೀರಿತ್ತು. ಮಳೆಯಲ್ಲಿ ಜನರು ಬಾರದಿರುವುದರಿಂದ ವ್ಯಾಪಾರ-ವಹಿವಾಟು ಕುಸಿತ ಕಂಡಿತ್ತು. ಹೋಟೆಲ್‌ಗಳಲ್ಲಿ ಊಟಕ್ಕಿಂತಲೂ ಹೆಚ್ಚಾಗಿ ಕಾಫಿ-ಟೀ ಮತ್ತು ಖಾರ, ಕುರುಕಲು ತಿಂಡಿಗಳಿಗೆ ಹೆಚ್ಚಿನ ಬೇಡಿಕೆ ಇತ್ತು.
ರಸ್ತೆಬದಿ ವ್ಯಾಪಾರ ಮಾಡುವವರ ಸ್ಥಿತಿ ಇನ್ನಷ್ಟು ಶೋಚನೀಯವಾಗಿತ್ತು. ಮಳೆಯಿಂದ ರಕ್ಷಣೆ ಪಡೆಯುವುದು ಒಂದೆಡೆಯಾದರೆ, ಗ್ರಾಹಕರಿಲ್ಲದೆ ಖಾಲಿ ಹೊಡೆಯುವಂತಹ ಸ್ಥಿತಿ ಸೃಷ್ಟಿಯಾಗಿತ್ತು. ಬಹುತೇಕರು ಮಳೆಯಿಂದಾಗಿ ಇಂದಿನ ರಸ್ತೆಬದಿ ವ್ಯಾಪಾರದಿಂದ ದೂರವೇ ಉಳಿದಿದ್ದರು.
ಚಳಿಯ ವಾತಾವರಣ:
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣದಲ್ಲಿ ಚಳಿ ಹೆಚ್ಚಾಗಿತ್ತು. ಮೋಡ ಸಂಪೂರ್ಣವಾಗಿ ಆಗಸವನ್ನು ಆವರಿಸಿದ್ದರೂ ದಿನವಿಡೀ ಸೂರ್ಯ ಒಮ್ಮೆಯೂ ಇಣುಕಿ ನೋಡುವುದಕ್ಕೆ ಸಾಧ್ಯವಾಗಲೇ ಇಲ್ಲ. ರೈನ್‌ಕೋಟ್, ಸ್ವೆಟರ್‌ಗಳನ್ನು ಧರಿಸಿಕೊಂಡು ಜನರು ಸಂಚರಿಸುತ್ತಿದ್ದರು. ಶಾಲೆ-ಕಾಲೇಜುಗಳಿಗೆ ರಜೆ ಇದ್ದುದರಿಂದ ಮಕ್ಕಳೂ ಮನೆಯಿಂದ ಹೊರಗೆ ಬರುವುದಕ್ಕೆ ಮಳೆ ಅವಕಾಶವನ್ನೇ ನೀಡಲಿಲ್ಲ.
ಇಂದೂ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ
ಮಂಡ್ಯ : ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಡಿ.3ರಂದು ಸಹ ನಿರಂತರ ಮಳೆ ಸುರಿಯುವುದಾಗಿ ಹಾಗೂ ಯೆಲ್ಲೋ ಅಲರ್ಟ್ ಘೋಷಣೆಯಾಗಿರುವುದುರಿಂದ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಲಾಗಿದೆ.
ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಹಾಗೂ ನಿರಂತರ ಮಳೆಯ ಹಿನ್ನೆಲೆಯಲ್ಲಿ ಡಿ.3 ರಂದು ಮಂಡ್ಯ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (ದ್ವಿತೀಯ ಪಿ.ಯುಸಿ ವರೆಗೆ) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
ಈ ರಜೆಯು ಜಿಲ್ಲೆಯ ಸರ್ಕಾರಿ, ಖಾಸಗಿ ಅನುದಾನಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (ಎರಡನೇ ಪಿಯುಸಿ) ವರೆಗೆ ಅನ್ವಯವಾಗುತ್ತದೆ. ಈ ರಜಾ ದಿನದ ಕಲಿಕಾ ಪ್ರಕ್ರಿಯೆ ಮುಂದಿನ ಸರ್ಕಾರಿ ರಜೆ ದಿನಗಳಲ್ಲಿ ಸರಿದೂಗಿಸುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.