ಕೊಪ್ಪಳ: ರೈತರಿಗೆ ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆ ಪ್ರಕ್ರಿಯೆ ಕೂಡಲೇ ಆರಂಭಿಸಿ, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ಕೃಷಿ ಇಲಾಖೆಯ ಅಧಿಕಾರಿ ಮತ್ತು ವಿತರಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಗೂಗಲ್ ಮೀಟ್ ನಡೆಸಿ ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ ವಾಡಿಕೆಗಿಂತ ಮುನ್ನವೇ ಆರಂಭವಾಗಿವೆ. ಜಿಲ್ಲೆಯಲ್ಲಿ ಈಗಾಗಲೇ ಎರಡ್ಮೂರು ಬಾರಿ ಬಿರುಸಿನ ಮಳೆ ಬಿದ್ದಿರುವುದರಿಂದ ರೈತ ಸಮುದಾಯದಿಂದ ಬಿತ್ತನೆ ಕಾರ್ಯ ಚುರುಕುಗೊಂಡಿವೆ. ಆದ್ದರಿಂದ ನೀರಾವರಿ ಆಶ್ರಿತ ರೈತರು ಸೇರಿದಂತೆ ಬಿತ್ತನೆ ಕಾರ್ಯ ಆರಂಭಿಸುವ ಎಲ್ಲ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜಿಲ್ಲಾದ್ಯಂತ ರಸಗೊಬ್ಬರ ವಿತರಣೆ ಕಾರ್ಯ ಶಿಸ್ತುಬದ್ಧವಾಗಿ ನಡೆಯಬೇಕು.

ಜಿಲ್ಲೆಯ ಪ್ರತಿಯೊಬ್ಬ ರೈತರಿಗೆ ಅನುಕೂಲವಾಗುವಂತೆ ಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಇಲ್ಲ. ಇಂದು ರಸಗೊಬ್ಬರ ಸಿಗದಿದ್ದರೂ ನಾಳೆಯಾದರೂ ತಪ್ಪದೇ ಲಭ್ಯವಾಗುತ್ತದೆ ಎಂಬ ಮಾಹಿತಿ ರೈತರಿಗೆ ನೀಡಬೇಕು. ರಸಗೊಬ್ಬರ ಸಿಗುವುದಿಲ್ಲ ಎಂದು ಯಾವುದೇ ಭಾಗದ ರೈತರು ಆತಂಕಕ್ಕೆ ಒಳಗಾಗಬಾರದು. ಆದ್ದರಿಂದ ರಸಗೊಬ್ಬರದ ಅವಶ್ಯಕತೆ ಇರುವ ಎಲ್ಲ ರೈತರಿಗೂ ರಸಗೊಬ್ಬರವು ಸಕಾಲಕ್ಕೆ ಲಭ್ಯವಾಗುವಂತೆ ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

2026-27ನೇ ಸಾಲಿನ ಮುಂಗಾರು ಹಂಗಾಮಿನ ಅವಧಿ ಏಪ್ರೀಲ್ 2026ರಿಂದ ಸೆಪ್ಟೆಂಬರ್‌ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರಕ್ಕೆ 49,451 ಮೆಟ್ರಿಕ್ ಟನ್, ಡಿಎಪಿಗೆ 17,817 ಮೆಟ್ರಿಕ್ ಟನ್, ಎಂಒಪಿಗೆ 5758 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ ಗೆ 43,446 ಮೆಟ್ರಿಕ್ ಟನ್ ಮತ್ತು ಎಸ್‌ಎಸ್‌ಪಿಗೆ 1231 ಮೆಟ್ರಿಕ್ ಟನ್ ಬೇಡಿಕೆ ಇದೆ. ಮೇ 19ರವರೆಗೆ ಜಿಲ್ಲೆಯಲ್ಲಿ 12,041 ಮೆಟ್ರಿಕ್ ಟನ್ ಯೂರಿಯಾ, 5795 ಮೆಟ್ರಿಕ್ ಟನ್ ಡಿಎಪಿ, 1014 ಮೆಟ್ರಿಕ್ ಟನ್, ಎಂಒಪಿ, 18269 ಮೆಟ್ರಿಕ್ ಟನ್ ಕಾಂಪ್ಲೆಕ್ಸ್, 535 ಮೆಟ್ರಿಕ್ ಟನ್ ಎಸ್‌ಎಸ್‌ಪಿ ದಾಸ್ತಾನು ಇದೆ ಎಂದು ಕೊಪ್ಪಳ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಮೇ 20ರಿಂದ ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆ ಪ್ರಕ್ರಿಯೆ ಆರಂಭಿಸಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.


ಗೂಗಲ್ ಮೀಟನಲ್ಲಿ ಜಂಟಿ ಕೃಷಿ ನಿರ್ದೇಶಕರು, ಉಪ ನಿರ್ದೇಶಕರು, ಕೊಪ್ಪಳ,ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕಾರಟಗಿ, ಕುಕನೂರ ಹಾಗೂ ಕನಕಗಿರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಮಾರ್ಕೆಟಿಂಗ್ ಅಧಿಕಾರಿಗಳು, ರಸಗೊಬ್ಬರ ವಿತರಕ ಸಂಘದ ಅಧ್ಯಕ್ಷರು ಮತ್ತು ಕೃಷಿ ಇಲಾಖೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.