ದೇವಾಲದಕೆರೆಯಲ್ಲಿ ಇಂದು ರಸಗೊಬ್ಬರ ಮಾರಾಟ ಮಳಿಗೆ ಓಪನ್‌

| Published : Jul 04 2025, 11:47 PM IST

ಸಾರಾಂಶ

ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘ ನಿ. ಇದರ ವತಿಯಿಂದದೇವಾಲದಕೆರೆ ಗ್ರಾಮದಲ್ಲಿ ನೂತನ ರಸಗೊಬ್ಬರ ಮಾರಾಟ ಮಳಿಗೆಯ ಉದ್ಘಾಟನೆ ಹಾಗೂ ರಸಗೊಬ್ಬರ ಬಳಕೆಯ ವಿಚಾರ ಸಂಕಿರಣವನ್ನು ಜುಲೈ 5ರಂದು ಆಯೋಜಿಸಲಾಗಿದ್ದು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾದ ಎಚ್.ಬಿ ಭಾಸ್ಕರ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘ ನಿ. ಇದರ ವತಿಯಿಂದದೇವಾಲದಕೆರೆ ಗ್ರಾಮದಲ್ಲಿ ನೂತನ ರಸಗೊಬ್ಬರ ಮಾರಾಟ ಮಳಿಗೆಯ ಉದ್ಘಾಟನೆ ಹಾಗೂ ರಸಗೊಬ್ಬರ ಬಳಕೆಯ ವಿಚಾರ ಸಂಕಿರಣವನ್ನು ಜುಲೈ 5ರಂದು ಆಯೋಜಿಸಲಾಗಿದ್ದು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾದ ಎಚ್.ಬಿ ಭಾಸ್ಕರ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ೨೦೧೬-೧೭ ನೇ ಸಾಲಿನಲ್ಲಿ ಕಳಪೆ ಪೋಟ್ಯಾಷ್ ರಸಗೊಬ್ಬರ ಮಾರಾಟವಾಗುತ್ತಿದ್ದು, ಇದು ಬೆಳೆಗಾರರ ಗಮನಕ್ಕೆ ಬಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕಳಪೆ ರಸಗೊಬ್ಬರ ಮಾರಾಟ ಮಾಡಿದ್ದವರಿಗೆ ಶಿಕ್ಷೆ ಕೊಡಿಸುವಲ್ಲಿ ಹಾನುಬಾಳು ಬೆಳೆಗಾರರ ಸಂಘವು ಪಾತ್ರ ವಹಿಸಿತ್ತು. ಬೆಳೆಗಾರರ ಹಿತದೃಷ್ಟಿಯಿಂದ ಗುಣಮಟ್ಟದ ರಸಗೊಬ್ಬರ ನೀಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಹಾನುಬಾಳು ಕಾಫಿ ಬೆಳೆಗಾರರ ಸಹಕಾರ ಸಂಘ ನಿ ಕಳೆದ ವರ್ಷ ಮೊದಲ ಅಧ್ಯಕ್ಷರಾಗಿ ನನ್ನನ್ನು ಉಪಾಧ್ಯಕ್ಷರಾಗಿ ಎಚ್.ಕೆ ಶಿವಕುಮಾರ್ ಹಾಗೂ ನಿರ್ದೇಶಕರು ಒಳಗೊಂಡು ಸಂಘ ರಚನೆಯಾಯಿತು. ಈ ಸಂಘದ ಮುಖ್ಯ ಉದ್ದೇಶ ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಇತ್ಯಾದಿ ಬೆಳೆಯುವ ಬೆಳೆಗಾರರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರ ಕೀಟನಾಶಕ, ಕಳೆನಾಶಕ, ಮೈಲುತುತ್ತು. ಸುಣ್ಣ, ಚೀಲ, ಟಾರ್ಪಲ್ ಮತ್ತು ಕೃಷಿ ಉಪಕರಣಗಳು ಇತ್ಯಾದಿ ಸೌಲಭ್ಯ ಒದಗಿಸುವುದು ಎಂದರು.

ಇತ್ತಿಚೀನ ದಿನಗಳಲ್ಲಿ ಕಾಫಿ ವ್ಯಾಪಾರಿಗಳು ಕಾಫಿಯನ್ನು ಕೊಳ್ಳಲು ಒಟಿ ಮತ್ತು ಮೊಯಿಸ್ಟರ್ ಮಾಡಿ ಗುಣಮಟ್ಟಕ್ಕೆ ತಕ್ಕಂತೆ ಕಾಫಿ ಕೊಳ್ಳುತ್ತಿರುವುದರಿಂದ ಬೆಳೆಗಾರರ ಹಿತದೃಷ್ಟಿಯಿಂದ ನಮ್ಮ ಸಹಕಾರ ಸಂಘದಲ್ಲಿ ಒಟಿ ಮತ್ತು ಮೊಯಿಸ್ಟರ್ ಟೆಸ್ಟ್‌ ಮಾಡಿಕೊಡಲಾಗುತ್ತಿದೆ. ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು. ಮೊದಲಿಗೆ ನಮ್ಮ ಸಂಘ ೩ ಲಕ್ಷ ರು. ಷೇರು ಬಂಡವಾಳದಲ್ಲಿ ವ್ಯವಹಾರ ಮಾಡಿ ಕೇವಲ ಒಂದು ವರ್ಷದಲ್ಲಿ ೨೦ ಕೋಟಿಗೂ ಹೆಚ್ಚು ವ್ಯಾಪಾರ ವಹಿವಾಟು ಮಾಡಿ ಸುಮಾರು ೨೫ ಲಕ್ಷ ರೂ ಲಾಭ ಪಡೆದಿರುತ್ತದೆ. ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಶನಿವಾರ ದೇವಾಲದಕೆರೆ ಗ್ರಾಮ ಪಂಚಾಯತಿ ಸಂಘದ ನೂತನ ಶಾಖೆಯ ಮಾರಾಟ ಮಳಿಗೆಗಳ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಎಚ್.ಎಲ್ ನರೇಶ್, ಎಂ.ವಿ ರತ್ನಾಕರ್, ಬೋಬಿಚ್ಚನ್ ಮಾಂಪಿಳ್ಳೆ, ಅಬ್ದುಲ್ ಮಜೀದ್ ಹಾಜರಿದ್ದರು.