ನಿಗಧಿತ ದರದಲ್ಲಿ ಮಾತ್ರ ರಸಗೊಬ್ಬರ ಮಾರಾಟ ಮಾಡಬೇಕು: ಮೀನಾ ನಾಗರಾಜ್‌

| Published : May 17 2024, 12:38 AM IST

ನಿಗಧಿತ ದರದಲ್ಲಿ ಮಾತ್ರ ರಸಗೊಬ್ಬರ ಮಾರಾಟ ಮಾಡಬೇಕು: ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲಗಳ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

- ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು । ಸಾರ್ವಜನಿಕರಿಗೆ ಕಾಣುವಂತೆ ದರಪಟ್ಟಿ ಹಾಕಬೇಕು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲಗಳ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮತ್ತು ಇತರೆ ಸಿದ್ಧತೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು, ರೈತ ಪ್ರತಿನಿಧಿಗಳು ಹಾಗೂ ರಸಗೊಬ್ಬರ ಡೀಲರ್ಸ್‌ಗಳೊಂದಿಗೆ ನಡೆದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸಗೊಬ್ಬರಗಳ ದಾಸ್ತಾನು ಹಾಗೂ ಮಾರಾಟ ದರಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪಾಯಿಂಟ್ ಆಫ್ ಸೇಲ್ (ಪಿಒಎಸ್) ಮುಖಾಂತರ ರಸಗೊಬ್ಬರ ಮಾರಾಟ ಮಾಡು ವುದು. ಇಲ್ಲವಾದಲ್ಲಿ ಸಂಬಂಧಪಟ್ಟ ರಸಗೊಬ್ಬರ ಮಾರಾಟಗಾರರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಮಟ್ಟದ ಸಗಟು ರಸಗೊಬ್ಬರ ಮಾರಾಟ ಪರವಾನಗಿ ಹೊಂದಿರುವವರು ಜಿಲ್ಲೆಗೆ ಹಂಚಿಕೆಯಾದ ರಸಗೊಬ್ಬರ ವನ್ನು ಅಂತರ ಜಿಲ್ಲೆಗೆ ಮಾರಾಟ ಮಾಡಲು ಜಂಟಿ ಕೃಷಿ ನಿರ್ದೇಶಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ರಸಗೊಬ್ಬರ ರೇಕ್ ಪಾಯಿಂಟ್‌ಗೆ ತಲುಪುವ ಕನಿಷ್ಟ ಒಂದು ದಿನ ಮುಂಚಿತವಾಗಿ ಡೀಲರ್ ವಾರು ರಸಗೊಬ್ಬರಗಳ ಸರಬರಾಜು ಮಾಹಿತಿಯನ್ನು ಕೃಷಿ ಇಲಾಖೆ ಗಮನಕ್ಕೆ ತಪ್ಪದೇ ತರಬೇಕಲ್ಲದೆ ಡೀಲರ್ ವಾರು ರಸಗೊಬ್ಬರಗಳನ್ನು ಸರಬರಾಜು ಮಾಡಿದ ತಕ್ಷಣವೇ ರಸಗೊಬ್ಬರ ಮಾರಾಟ ಕಂಪನಿ, ಸಗಟು ರಸಗೊಬ್ಬರ ಮಾರಾಟಗಾರರು ಎಂಎಫ್‌ಎಂಎಸ್ ತಂತ್ರಾಂಶ / ಪಿಒಎಸ್ ಮುಖಾಂತರ ದಾಸ್ತಾನು ಅಪ್‌ಡೇಟ್ ಮಾಡುವುದು ಕಡ್ಡಾಯ ಎಂದರು.ರಸಗೊಬ್ಬರಗಳ ಜೊತೆಗೆ ಇತರೆ ಕೃಷಿ ಪರಿಕರಗಳನ್ನು ಲಿಂಕ್ ಮಾಡಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಎಫ್‌ಸಿಒ 1985 ರನ್ವಯ ಕ್ರಮ ಜರುಗಿಸಲಾಗುವುದು. ರಸಗೊಬ್ಬರ ಕಂಪನಿಗಳಿಂದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಗಳನ್ನು ಡ್ರೋಣ್‌ ಮೂಲಕ ಸಿಂಪಡಣೆ ಮಾಡಿ ರೈತರ ತಾಲೂಕುಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಪ್ರಚಾರ ಮಾಡುವಂತೆ ರಸಗೊಬ್ಬರ ಸರಬರಾಜುದಾರರಿಗೆ ಸೂಚಿಸಿದ ಅವರು, ರಸಗೊಬ್ಬರ ಕಂಪನಿಗಳು ಗೋದಾಮು ಸ್ಥಾಪನೆಗೆ ತುರ್ತು ಕ್ರಮವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ಹೆಸರು, ಸೂರ್ಯಕಾಂತಿ, ನೆಲಗಡಲೆ, ಉದ್ದು, ಆಲಸಂದೆ, ಸೇರಿದಂತೆ ಒಟ್ಟು 98,000 ಹೆಕ್ಟೇರ್ ಭೂಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ರಸಗೊಬ್ಬರ ಬೇಡಿಕೆ 35,073 ಮೆಟ್ರಿಕ್ ಟನ್‌ಗಳಿದ್ದು, ಜಿಲ್ಲೆಯಲ್ಲಿ ಈಗಾಗಲೇ 41,151 ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರ ದಾಸ್ತಾನು ಇದೆ. ಬಿತ್ತನೆಗೆ ಬೇಕಾದ ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಗೆ ಸರಬರಾಜು ಆಗುವ ರಸಗೊಬ್ಬರಗಳ ಮಾಹಿತಿಯನ್ನು ಕೃಷಿ ಇಲಾಖೆಗೆ ತಪ್ಪದೇ ನೀಡುವಂತೆ ರಸಗೊಬ್ಬರ ಸರಬರಾಜು ಕಂಪನಿಗಳ ಪ್ರತಿನಿಧಿಗಳಿಗೆ ಸೂಚಿಸಿದರು.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿಗಳು, ಕೃಷಿ ಪರಿಕರ ಮಾರಾಟಗಾರರ ಸಂಘದ ಪ್ರತಿನಿಧಿಗಳು, ವಿವಿಧ ರಸಗೊಬ್ಬರಗಳ ಸರಬರಾಜು ಕಂಪನಿಯ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪೋಟೋ ಫೈಲ್‌ ನೇಮ್‌ 16 ಕೆಸಿಕೆಎಂ 4ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮತ್ತು ಇತರೆ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು. ಜಿಪಂ ಸಿಇಓ ಡಾ. ಗೋಪಾಲಕೃಷ್ಣ, ಜಂಟಿ ಕೃಷಿ ನಿರ್ದೇಶಕಿ ಸುಜಾತ ಇದ್ದರು.